ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ವಾಯುದಾಳಿ

Update: 2022-06-18 17:49 GMT
Image: Pexel

ಜೆರುಸಲೇಂ, ಜೂ.18: ದಕ್ಷಿಣ ಇಸ್ರೇಲ್ ನ ಅಷ್ಕೆಲನ್ ನಗರವನ್ನು ಗುರಿಯಾಗಿಸಿ ಪೆಲೆಸ್ತೀನ್ ನಿಯಂತ್ರಣದ ಪ್ರದೇಶದಿಂದ ರಾಕೆಟ್ ದಾಳಿ ನಡೆಸಿರುವುದಕ್ಕೆ ಪ್ರತಿಯಾಗಿ ಇಸ್ರೇಲ್ ಗಾಝಾ ಪಟ್ಟಿಯ ಮೇಲೆ ವಾಯುದಾಳಿ ನಡೆಸಿದೆ ಎಂದು ವರದಿಯಾಗಿದೆ.ಗಾಝಾಪಟ್ಟಿ ಪ್ರದೇಶದಲ್ಲಿ ಕೃಷಿ ಭೂಮಿಗೆ ಇಸ್ರೇಲ್ ದಾಳಿ ನಡೆಸಿದೆ ಎಂದು ಈ ಪ್ರದೇಶದ ನಿಯಂತ್ರಣ ಹೊಂದಿರುವ ಪೆಲೆಸ್ತೀನ್‌ನ ಹಮಾಸ್ ಸಂಘಟನೆ ಹೇಳಿದೆ. ಇದನ್ನು ನಿರಾಕರಿಸಿರುವ ಇಸ್ರೇಲ್, ಹಮಾಸ್ನ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಪ್ರತಿಪಾದಿಸಿದೆ. ಇಸ್ರೇಲ್ ನಗರದ ಮೇಲಿನ ರಾಕೆಟ್ ದಾಳಿಗೆ ಪ್ರತಿಯಾಗಿ, ಗಾಝಾ ಪಟ್ಟಿಯಲ್ಲಿನ ಹಮಾಸ್ ಉಗ್ರರ ಹಲವು ನೆಲೆಗಳ ಮೇಲೆ ವಾಯುದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆಯ ಹೇಳಿಕೆ ತಿಳಿಸಿದೆ.

ಎರಡೂ ದಾಳಿಗಳಲ್ಲಿ ಉಂಟಾಗಿರುವ ಸಾವು ನೋವು ಅಥವಾ ನಷ್ಟದ ಬಗ್ಗೆ ಇದುವರೆಗೆ ಯಾವುದೇ ಮಾಹಿತಿಯಿಲ್ಲ. ಹಮಾಸ್ ಅಥವಾ ಇತರ ಸಂಘಟನೆ ಇಸ್ರೇಲ್ ನಗರದ ಮೇಲಿನ ದಾಳಿಯ ಹೊಣೆಯನ್ನು ಇದುವರೆಗೆ ವಹಿಸಿಕೊಂಡಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಶುಕ್ರವಾರ ಆಕ್ರಮಿತ ಪಶ್ಚಿಮ ದಂಡೆಯ ಜೆನಿನ್‌ನಲ್ಲಿ ಇಸ್ರೇಲ್ ಸೇನೆ ಕಾರ್ಯಾಚರಣೆಯಲ್ಲಿ ಮೂವರು ಪೆಲೆಸ್ತೀನೀಯರು ಮೃತಪಟ್ಟು 10 ಮಂದಿ ಗಾಯಗೊಂಡಿದ್ದರು. ಶುಕ್ರವಾರ ನಡೆದ ಮತ್ತೊಂದು ಘಟನೆಯಲ್ಲಿ ಇಸ್ರೇಲ್ನ ವೀಕ್ಷಣಾ ಬಲೂನು ಉತ್ತರ ಗಾಝಾ ಪಟ್ಟಿಯಲ್ಲಿ ಪತನಗೊಂಡಿತ್ತು. ಈ ವರ್ಷ 60ಕ್ಕೂ ಅಧಿಕ ಪೆಲೆಸ್ತೀನೀಯರನ್ನು ಇಸ್ರೇಲ್ ಸೇನೆ ಹತ್ಯೆಗೈದಿದ್ದು ಇದರಲ್ಲಿ ಹೆಚ್ಚಿನ ಹತ್ಯೆ ಶೋಧ ಕಾರ್ಯಾಚರಣೆಯಲ್ಲಿ ನಡೆದಿದೆ ಎಂದು ಪೆಲೆಸ್ತೀನ್ ಆರೋಗ್ಯ ಸಚಿವಾಲಯ ಹೇಳಿದೆ. ಪೆಲೆಸ್ತೀನ್ನ ದಾಳಿಯಲ್ಲಿ 19 ಇಸ್ರೇಲ್ ಪ್ರಜೆಗಳು ಮೃತಪಟ್ಟಿರುವುದಾಗಿ ಇಸ್ರೇಲ್ ಅಧಿಕಾರಿಗಳು ಹೇಳಿದ್ದಾರೆ.
 
ಪೆಲೆಸ್ತೀನ್ ಬಿಕ್ಕಟ್ಟು ಪರಿಹಾರವಾದರೆ ಮಾತ್ರ ಶಾಂತಿ ನೆಲೆಸಲು ಸಾಧ್ಯ: ಅರಬ್ ಲೀಗ್ ಮುಖ್ಯಸ್ಥ 

ಪೆಲೆಸ್ತೀನ್ ಸಮಸ್ಯೆಗೆ ಪರಿಹಾರವು ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ಸಹಕಾರವನ್ನು ಸ್ಥಾಪಿಸುವ ಏಕೈಕ ಮಾರ್ಗವಾಗಿದೆ ಎಂದು ಅರಬ್ ದೇಶಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಹ್ಮದ್ ಅಬೂಲ್ ಘೆಯ್ಟಾ ಹೇಳಿದ್ದಾರೆ.
 
ಕೈರೋದಲ್ಲಿ 9ನೇ ಬಾಕು ಇಂಟರ್ನ್ಯಾಷನಲ್ ಫಾರಂನ ‘ಮಧ್ಯಪ್ರಾಚ್ಯದ ಭವಿಷ್ಯ’ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂತಹ ಪರಿಹಾರ ಸಾಧ್ಯವಾಗಬೇಕಿದ್ದರೆ ಇಸ್ರೇಲ್ ಸಂಬಂಧಿತ ಅಂತರಾಷ್ಟ್ರೀಯ ನಿರ್ಣಯಗಳನ್ನು ಗೌರವಿಸಬೇಕು, 1967ರ ಜೂನ್ 4ರ ಸ್ಥಾನಕ್ಕೆ ಮರಳಬೇಕು ಮತ್ತು ಪೂರ್ವ ಜೆರುಸಲೇಂ ಪೆಲೆಸ್ತೀನ್ ದೇಶದ ರಾಜಧಾನಿ ಎಂದು ಪರಿಗಣಿಸಬೇಕು ಎಂದರು.
    
ಪೆಲೆಸ್ತೀನ್ ಜನರ ಹಕ್ಕುಗಳನ್ನು ಸಂಪೂರ್ಣವಾಗಿ ಗೌರವಿಸದಿದ್ದರೆ ಯಾವುದೇ ಪ್ರಾದೇಶಿಕ ಸಹಕಾರದ ಚೌಕಟ್ಟು ದುರ್ಬಲ ಮತ್ತು ದಹನಶೀಲವಾಗಿರುತ್ತದೆ ಎಂದು ಘೆಯ್ಟಾ ಹೇಳಿದ್ದಾರೆ. ವಿಶ್ವದ ದೇಶಗಳ ಆದ್ಯತೆಯ ಪಟ್ಟಿಯಲ್ಲಿ ಪೆಲೆಸ್ತೀನೀಯರ ವಿಷಯದ ಕುರಿತ ಆಸಕ್ತಿ ಕಡಿಮೆಯಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಪೆಲೆಸ್ತೀನೀಯರ ಹಕ್ಕುಗಳ ಕಡೆಗಣಿಸಿದರೆ ಅಥವಾ ನಿರ್ಲಕ್ಷಿಸಿದರೆ ಮಧ್ಯಪ್ರಾಚ್ಯಕ್ಕೆ ಯಾವುದೇ ಸಮೃದ್ಧ ಭವಿಷ್ಯ ಇರುವುದಿಲ್ಲ. ಇಸ್ರೇಲ್ನ ಒಂದು ಆಡಳಿತದಡಿ ಇಸ್ರೇಲ್ ಮತ್ತು ಪೆಲೆಸ್ತೀನ್ ಜನರಿರುವ ಎರಡು ರಾಷ್ಟ್ರಗಳು ಎಂಬ ಪರಿಕಲ್ಪನೆಯನ್ನು ಕಲ್ಪಿಸಲೂ ಸಾಧ್ಯವಾಗುತ್ತಿಲ್ಲ. ಪೆಲೆಸ್ತೀನ್ ಜನರನ್ನು ಕಡೆಗಣಿಸುವ ಅಥವಾ ಅವರನ್ನು ನಿರ್ಮೂಲನೆಯನ್ನು ಕಲ್ಪಿಸುವ ಯಾವುದೇ ಯೋಜನೆ ಅಸಾಧ್ಯ. ಸಮಸ್ಯೆಯನ್ನು ಈಗಲೇ ಪರಿಹರಿಸುವುದು ಒಳಿತು ಎಂಬುದು ಇಸ್ರೇಲ್ಗೆ ನನ್ನ ಸಲಹೆಯಾಗಿದೆ ಎಂದವರು ಹೇಳಿದ್ದಾರೆ.ಇಸ್ರೇಲ್ ಮಾಜಿ ಪ್ರಧಾನಿ ಎಹುದ್ ಬರಾಕ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News