ಪೆಟ್ರೋಲ್‌ ಗಾಗಿ ಸಾಲು ನಿಂತವರಿಗೆ ಸ್ವತಃ ಚಾ-ತಿಂಡಿ ವಿತರಿಸುವ ಫೋಟೊ ಪ್ರಕಟಿಸಿದ ಶ್ರೀಲಂಕಾ ಮಾಜಿ ಕ್ರಿಕೆಟಿಗ

Update: 2022-06-19 15:14 GMT
Photo: Twitter/Rosh_maha

ಹೊಸದಿಲ್ಲಿ: ಶ್ರೀಲಂಕಾವು ಆಹಾರ, ಇಂಧನ, ಔಷಧಿಗಳ ತೀವ್ರ ಕೊರತೆಯನ್ನು ಎದುರಿಸುತ್ತಿರುವಾಗ ಮಾಜಿ ಕ್ರಿಕೆಟಿಗ ರೋಷನ್ ಮಹಾನಾಮ ಅವರು ಕೊಲಂಬೊದ ಪೆಟ್ರೋಲ್ ಬಂಕ್‌ನಲ್ಲಿ ಸರತಿ ಸಾಲಿನಲ್ಲಿ ಕಾಯುತ್ತಿರುವವರಿಗೆ ಚಹಾ ಮತ್ತು ಬನ್ ವಿತರಿಸುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಶ್ರೀಲಂಕಾ ಸ್ವಾತಂತ್ರ್ಯದ ನಂತರದ ತನ್ನ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಅನುಭವಿಸುತ್ತಿದ್ದು, ದೇಶವು ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.

“ವಾರ್ಡ್ ಪ್ಲೇಸ್ ಮತ್ತು ವಿಜೆರಾಮ ಮಾವತಾ ಸುತ್ತಮುತ್ತಲಿನ ಪೆಟ್ರೋಲ್ ಸರತಿಯಲ್ಲಿದ್ದ ಜನರಿಗೆ ನಾವು ಸಮುದಾಯ ಊಟದ ತಂಡದೊಂದಿಗೆ ಟೀ ಮತ್ತು ಬನ್‌ಗಳನ್ನು ಇಂದು ಸಂಜೆ ವಿತರಿಸಿದೆವು. ಸರತಿ ಸಾಲುಗಳು ದಿನದಿಂದ ದಿನಕ್ಕೆ ಉದ್ದವಾಗುತ್ತಿವೆ ಮತ್ತು ಸರತಿಯಲ್ಲಿ ಉಳಿಯುವ ಜನರಿಗೆ ಅನೇಕ ಆರೋಗ್ಯ ಅಪಾಯಗಳಿವೆ" ಎಂದು ಕ್ರಿಕೆಟಿಗ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇಂಧನ ಕೇಂದ್ರಗಳ ಕಾವಲು ಕಾಯಲು ಶ್ರೀಲಂಕಾ ಸಶಸ್ತ್ರ ಪೋಲೀಸ್ ಮತ್ತು ಪಡೆಗಳನ್ನು ನಿಯೋಜಿಸಿದೆ. ಶ್ರೀಲಂಕಾದಲ್ಲಿ ಪ್ರಯಾಣವನ್ನು ಕಡಿಮೆ ಮಾಡಲು ಮತ್ತು ಖಾಲಿಯಾಗುತ್ತಿರುವ ಇಂಧನ ದಾಸ್ತಾನುಗಳನ್ನು ಸಂರಕ್ಷಿಸುವ ಪ್ರಯತ್ನದಲ್ಲಿ ಸರ್ಕಾರವು ಎರಡು ವಾರಗಳ ಕಾಲ ರಾಜ್ಯ ಸಂಸ್ಥೆಗಳು ಮತ್ತು ಶಾಲೆಗಳನ್ನು ಮುಚ್ಚುವಂತೆ ಘೋಷಿಸಿದೆ.

"ದಯವಿಟ್ಟು, ಇಂಧನ ಸರತಿ ಸಾಲಿನಲ್ಲಿ ಒಬ್ಬರನ್ನೊಬ್ಬರು ನೋಡಿಕೊಳ್ಳಿ. ಸಾಕಷ್ಟು ಕುಡಿಯುವ ನೀರು ಮತ್ತು ಆಹಾರವನ್ನು ತನ್ನಿ. ನಿಮ್ಮ ಆರೋಗ್ಯ ಸರಿ ಇಲ್ಲದಿದ್ದರೆ ದಯವಿಟ್ಟು ನಿಮ್ಮ ಪಕ್ಕದಲ್ಲಿರುವ ವ್ಯಕ್ತಿಗೆ ಈ ವಿಚಾರವನ್ನು ತಿಳಿಸಿ ಮತ್ತು ಸಹಾಯ ಮಾಡುವಂತೆ ಕೇಳಿ ಅಥವಾ 1990 ಗೆ ಕರೆ ಮಾಡಿ. ಈ ಕಷ್ಟದ ಸಮಯದಲ್ಲಿ ನಾವು ಒಬ್ಬರನ್ನೊಬ್ಬರು ಆರೈಕೆ ಮಾಡಬೇಕು," ಕ್ರಿಕೆಟಿಗ ರೋಶನ್‌ ಮಹಾನಾಮ ತಮ್ಮ ಪೋಸ್ಟ್‌ ನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News