×
Ad

ಮಕ್ಕಳನ್ನು ಬೆಳೆಸುವಲ್ಲಿ ತಾಯಂದಿರ ಹೊರೆಯನ್ನು ತಗ್ಗಿಸಲು ಪಿತೃತ್ವ ರಜೆ ವಿಸ್ತರಣೆಗೆ ತಜ್ಞರ ಶಿಫಾರಸು:‌ ಎನ್‌ಸಿಡಬ್ಲ್ಯ

Update: 2022-06-19 20:15 IST
PHOTO: PIB

ಹೊಸದಿಲ್ಲಿ,ಜೂ.19: ತಾಯಂದಿರ ಮೇಲಿನ ಮಕ್ಕಳನ್ನು ಬೆಳೆಸುವ ಹೊರೆಯನ್ನು ಕಡಿಮೆ ಮಾಡಲು ಪಿತೃತ್ವ ರಜೆಯ ವಿಸ್ತರಣೆ, ಉದ್ಯೋಗದಾತರಿಗೆ ಉತ್ತೇಜನ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವಂತೆ ಕಾರ್ಪೊರೇಟ್ ಕ್ಷೇತ್ರವನ್ನು ಸಂವೇದನಾಶೀಲಗೊಳಿಸುವುದು ಇವು ಮಾತೃತ್ವ ಪ್ರಯೋಜನ ಕಾಯ್ದೆ,1961 ಮತ್ತು 2017ರ ತಿದ್ದುಪಡಿ ಕುರಿತು ಅಂತಿಮ ಕಾನೂನು ಪರಾಮರ್ಶೆ ಸಮಾಲೋಚನಾ ಸಭೆಯಲ್ಲಿ ತಜ್ಞರು ಮಾಡಿರುವ ಶಿಫಾರಸುಗಳಲ್ಲಿ ಸೇರಿವೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲು) ತಿಳಿಸಿದೆ.

ಸಭೆಯು ಮಹಿಳೆಯರ ಮೇಲೆ ಪರಿಣಾಮ ಬೀರುವ ಶಾಸನದ ಪುನರ್ಪರಿಶೀಲನೆ ಮತ್ತು ವಿಶ್ಲೇಷಣೆ ಹಾಗೂ ಯಾವುದೇ ಲೋಪದೋಷ,ಅಸಮರ್ಪಕತೆ ಮತ್ತು ಕೊರತೆಯನ್ನು ನೀಗಿಸಲು ಶಿಫಾರಸುಗಳನ್ನು ಮಾಡುವ ಉದ್ದೇಶ ಹೊಂದಿತ್ತು ಎಂದು ಅದು ಹೇಳಿದೆ.
ಎನ್‌ಸಿಡಬ್ಲು ತಿದ್ದುಪಡಿಗಳಿಗೆ ಮತ್ತು ಶಾಸನದ ವ್ಯಾಪ್ತಿಯನ್ನು ಹೆಚ್ಚಿಸಲು ನಿರ್ದಿಷ್ಟ ಶಿಫಾರಸುಗಳನ್ನು ರೂಪಿಸಲು ಕಾಯ್ದೆಯ ಪುನರ್ಪರಿಶೀಲನೆಗಾಗಿ ಒಂದು ಪ್ರಾಥಮಿಕ ಸಮಾಲೋಚನೆ ಮತ್ತು ಐದು ಪ್ರಾದೇಶಿಕ ಮಟ್ಟದ ಸಮಾಲೋಚನೆಗಳನ್ನು ನಡೆಸಿದೆ.

ಈ ಸಮಾಲೋಚನೆಯ ಮೂಲಕ ದೇಶಾದ್ಯಂತದಿಂದ ತಜ್ಞರು ಮತ್ತು ಸಂಬಂಧಿಸಿದವರ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಪಡೆದುಕೊಳ್ಳಲು ಆಯೋಗವು ಪ್ರಯತ್ನಿಸಿದೆ.ಅಸಂಘಟಿತ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರ ಸಮಸ್ಯೆಗಳು,ಕೆಲಸದ ಸ್ಥಳಗಳಲ್ಲಿ ಶಿಶುವಿಹಾರ ಸೌಲಭ್ಯಗಳನ್ನು ಒದಗಿಸುವುದು ಮತ್ತು ಉದ್ಯೋಗದಾತರಿಗೆ ಪ್ರೋತ್ಸಾಹನದ ಬಗ್ಗೆಯೂ ತಜ್ಞರು ಚರ್ಚಿಸಿದ್ದಾರೆ ಎಂದು ಎನ್‌ಸಿಡಬ್ಲು ತಿಳಿಸಿದೆ.ಮಹಿಳೆಯರು ಎದುರಿಸುತ್ತಿರುವ ನೈಜ ಸವಾಲುಗಳು ಮತ್ತು ತಾಂತ್ರಿಕ ಸಮಸ್ಯೆಗಳ ಕುರಿತು ಚರ್ಚಿಸಲು ಕಾನೂನು ತಜ್ಞರು,ವಕೀಲರು,ಶಿಕ್ಷಣ ತಜ್ಞರನ್ನು ಆಯೋಗವು ಆಹ್ವಾನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News