ಅಸಹಿಷ್ಣುತೆ ಕುರಿತು ʼಆಯ್ದ ಆಕ್ರೋಶಗಳʼ ಅಗತ್ಯ ಭಾರತಕ್ಕಿಲ್ಲ: ವಿಶ್ವಸಂಸ್ಥೆ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ

Update: 2022-06-19 15:28 GMT
TS Tirumurti

ನ್ಯೂಯಾರ್ಕ್,ಜೂ.19: ಎಲ್ಲರನ್ನೂ ಒಳಗೊಳ್ಳುವಿಕೆ ಮತ್ತು ಸಹಿಷ್ಣುತೆಯ ವೌಲ್ಯಗಳನ್ನು ಭಾರತವು ಉತ್ತೇಜಿಸುತ್ತಿದೆ ಮತ್ತು ಹೊರಗಿನವರಿಂದ ‘ಆಯ್ದ ಆಕ್ರೋಶಗಳ’ ಅಗತ್ಯ ಅದಕ್ಕಿಲ್ಲ ಎಂದು ವಿಶ್ವಸಂಸ್ಥೆಗೆ ಭಾರತದ ಕಾಯಂ ಪ್ರತಿನಿಧಿಯಾಗಿರುವ ಟಿ.ಎಸ್.ತಿರುಮೂರ್ತಿ ಅವರು ಹೇಳಿದ್ದಾರೆ.

‌ಅಂತರರಾಷ್ಟ್ರೀಯ ದ್ವೇಷಭಾಷಣ ನಿಗ್ರಹ ದಿನದ ಅಂಗವಾಗಿ ದ್ವೇಷಭಾಷಣವನ್ನು ಎದುರಿಸುವಲ್ಲಿ ಶಿಕ್ಷಣದ ಪಾತ್ರ ಕುರಿತು ಚರ್ಚಿಸಲು ಶನಿವಾರ ಆಯೋಜಿಸಲಾಗಿದ್ದ ಉನ್ನತ ಮಟ್ಟದ ಕಾರ್ಯಕ್ರಮದಲ್ಲಿ ತಿರುಮೂರ್ತಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಪ್ರವಾದಿ ಮುಹಮ್ಮದ್ರ ಕುರಿತು ಬಿಜೆಪಿ ನಾಯಕರ ನಿಂದನಾತ್ಮಕ ಹೇಳಿಕೆಗಳಿಗಾಗಿ ಹಲವಾರು ಮುಸ್ಲಿಂ ಬಾಹುಳ್ಯದ ದೇಶಗಳು ಭಾರತವನ್ನು ಟೀಕಿಸುತ್ತಿರುವ ಹಿನ್ನೆಲೆಯಲ್ಲಿ ತಿರುಮೂರ್ತಿಯವರ ಈ ಹೇಳಿಕೆ ಹೊರಬಿದ್ದಿದೆ.

ಭಾರತದ ಬಹುಸಾಂಸ್ಕೃತಿಕ ನಂಬಿಕೆಗಳ ಸಂಕೀರ್ಣ ವ್ಯವಸ್ಥೆಯಿಂದಾಗಿ ಅದು ಐತಿಹಾಸಿಕವಾಗಿ ಯಹೂದಿಗಳು,ಪಾರ್ಸಿಗಳು ಮತ್ತು ಟಿಬೆಟನ್ ರು ಸೇರಿದಂತೆ ಆಶ್ರಯವನ್ನು ಬಯಸುವವರ ಪಾಲಿಗೆ ಸ್ವರ್ಗವಾಗಿದೆ ಎಂದು ಹೇಳಿದ ತಿರುಮೂರ್ತಿ,‘ಇತಿಹಾಸದ ಈ ಅರಿವಿನೊಂದಿಗೆ ಭಾರತವು ಮೂಲಭೂತವಾದ ಮತ್ತು ಭಯೋತ್ಪಾದಕತೆಯನ್ನು ಎದುರಿಸುವಲ್ಲಿ ಹಾಗೂ ಸಹಿಷ್ಣುತೆ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವುದನ್ನು ಮುಂದುವರಿಸಿದೆ. 

ವಿಪಥನಗಳನ್ನು ನಮ್ಮ ಕಾನೂನಿನ ಚೌಕಟ್ಟಿನೊಳಗೆ ನಿರ್ವಹಿಸಲಾಗುತ್ತದೆ ಮತ್ತು ಸ್ವಾರ್ಥವನ್ನು ಪಾಲಿಸುವ, ಕೋಮು ಸ್ವರೂಪವನ್ನು ಹೊಂದಿರುವ ಮತ್ತು ವಿಭಜಕ ಕಾರ್ಯಸೂಚಿಯನ್ನು ಅನುಸರಿಸುವ ಹೊರಗಿನವರ ಆಯ್ದ ಆಕ್ರೋಶಗಳ ಅಗತ್ಯ ನಮಗಿಲ್ಲ’ ಎಂದು ನುಡಿದರು.

ಧಾರ್ಮಿಕ-ಫೋಬಿಯಾಗಳನ್ನು ಎದುರಿಸುವುದು ಆಯ್ದ ಪ್ರಕ್ರಿಯೆಯಾಗಲು ಸಾಧ್ಯವಿಲ್ಲ ಮತ್ತು ಅದು ಅಬ್ರಹಾಮೇತರ ಧರ್ಮಗಳ ವಿರುದ್ಧದ ಫೋಬಿಯಾಗಳಿಗೂ ಸಮಾನವಾಗಿ ಅನ್ವಯವಾಗಬೇಕು. ಇದನ್ನು ಮಾಡುವವರೆಗೆ ಇಂತಹ ಅಂತರರಾಷ್ಟ್ರೀಯ ದಿನಗಳು ಎಂದಿಗೂ ತಮ್ಮ ಗುರಿಗಳನ್ನು ಸಾಧಿಸುವುದಿಲ್ಲ ಎಂದ ತಿರುಮೂರ್ತಿ,ಧಾರ್ಮಿಕ ಸಮುದಾಯಗಳ ವಿರುದ್ಧ ಫೋಬಿಯಾಗಳಿಗೆ ಸಂಬಂಧಿಸಿದಂತೆ ಎರಡು ಮಾನದಂಡಗಳು ಇರಲು ಸಾಧ್ಯವಿಲ್ಲ ಎಂದು ಹೇಳಿದರು.

ಭಾರತವು ಭಯೋತ್ಪಾದನೆಯ,ವಿಶೇಷವಾಗಿ ಗಡಿಯಾಚೆಯ ಭಯೋತ್ಪಾದನೆಯ ದೊಡ್ಡ ಬಲಿಪಶುವಾಗಿದೆ ಎಂದು ಹೇಳಿದ ಅವರು,‘ಬಹುತ್ವ ಮತ್ತು ಪ್ರಜಾಪ್ರಭುತ್ವದ ತತ್ತ್ವಗಳನ್ನು ಉತ್ತೇಜಿಸುವಾಗ ಭೀತಿವಾದವನ್ನು ಎದುರಿಸುವಲ್ಲಿ ನಿಜವಾದ ಕೊಡುಗೆಯನ್ನು ಸಲ್ಲಿಸುವ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲು ನಾವು ದೇಶಗಳಿಗೆ ಕರೆ ನೀಡುತ್ತಿದ್ದೇವೆ’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News