ಪ್ರತಿಪಕ್ಷ ನಾಯಕತ್ವವನ್ನು ಅನರ್ಹಗೊಳಿಸುವ ಮೂಲಕ 15 ವರ್ಷ ಆಡಳಿತ ನಡೆಸಲು ಬಯಸಿದ್ಧ ಇಮ್ರಾನ್ ಖಾನ್

Update: 2022-06-19 17:33 GMT
Facebook/ImranKhanOfficial

ಇಸ್ಲಾಮಾಬಾದ್,ಜೂ.19: ಪಾಕಿಸ್ತಾನದ ಉಚ್ಚಾಟಿತ ಪ್ರಧಾನಿ ಇಮ್ರಾನ್ ಖಾನ್ ಅವರು ತನ್ನ ಆಡಳಿತವನ್ನು 15 ವರ್ಷಗಳಿಗೆ ವಿಸ್ತರಿಸುವಂತಹ ‘ ಫ್ಯಾಶಿಸ್ಟ್’ ಯೋಜನೆಗಳನ್ನು ಹಮ್ಮಿಕೊಂಡಿದ್ದರು ಹಾಗೂ ಈ ವರ್ಷದ ಅಂತ್ಯದೊಳಗೆ ಪ್ರತಿಪಕ್ಷಗಳ ನಾಯಕರನ್ನು ಅನರ್ಹಗೊಳಿಸಲು ಬಯಸಿದ್ದರು ಎಂದು ಆಡಳಿತಾರೂಢ ಪಿಎಂಎಲ್-ಎನ್ ಪಕ್ಷದ ಹಿರಿಯ ಸಚಿವರೊಬ್ಬರು ತಿಳಿಸಿರುವುದಾಗಿ ಮಾಧ್ಯಮಸಂಸ್ಥೆಯೊಂದು ವರದಿ ಮಾಡಿದೆ.

 ಇಸ್ಲಾಮಾಬಾದ್ ನಲ್ಲಿ ಟಿವಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪಾಕಿಸ್ತಾನದ ವಿದ್ಯುತ್ ಸಚಿವ ಖುರ್ರಂ ದಸ್ತಗೀರ್ ಅವರು, ಪಿಎಂಎಲ್-ಎನ್ನ ಹಾಲಿ ಪ್ರಧಾನಿ ಶಹಬಾಝ್ ಶರೀಫ್, ಅಹ್ಸಾನ್ ಇಕ್ಬಾಲ್ ಹಾಗೂ ಮಾಜಿ ಪ್ರಧಾನಿ ಶಾಹೀದ್ ಖಾಕನ್ ಅಬ್ಬಾಸಿ ಸೇರಿದಂತೆ ಪ್ರತಿಪಕ್ಷ ನಾಯಕತ್ವವನ್ನು ಸಂಪೂರ್ಣವಾಗಿ ವಜಾಗೊಳಿಸಲು ಬಯಸಿದ್ದರು ಎಂಬ ಬಗ್ಗೆ ತನಗೆ ಪೂರ್ವಭಾವಿ ಮಾಹಿತಿಯಿದ್ದುದಾಗಿ ಹೇಳಿದ್ದಾರೆ.

  ತನ್ನ ಆರೋಪಕ್ಕೆ ಸಮರ್ಥನೆಯಾಗಿ ದಸ್ತಗೀರ್ ಅವರು, ಪ್ರಧಾನಿ ಇಮ್ರಾನ್ ಖಾನ್ ತನ್ನ ರಾಜಕೀಯ ಎದುರಾಳಿಗಳ ವಿರುದ್ಧದ ಪ್ರಕರಣಗಳ ವಿಚಾರಣೆಯನ್ನು ತ್ವರಿತಗೊಳಿಸಲು 100 ಮಂದಿ ನ್ಯಾಯಾಧೀಶರನ್ನು ಗೊತ್ತುಪಡಿಸಲಾಗುವುದೆಂದು ಘೋಷಿಸಿದ್ದ ಬಗ್ಗೆ ಡಾನ್ ಸುದ್ದಿಪತ್ರಿಕೆ ವರದಿ ಮಾಡಿರುವುದನ್ನು ಸ್ಮರಿಸಿಕೊಂಡಿದ್ದಾರೆ.
  
ಸಾರ್ವತ್ರಿಕ ಚುನಾವಣೆಗೆ ಕೇವಲ ಒಂದೂವರೆ ವರ್ಷ ಉಳಿದಿರುವಂತೆಯೇ, ದೇಶದ ಆಡಳಿತವನ್ನು ಕೈಗೆತ್ತಿಕೊಳ್ಳುವುದಕ್ಕೆ ಪಿಎಂಎಲ್-ಎನ್ ಪಕ್ಷ ಯಾಕೆ ಮುಂದಾಯಿತು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘‘ಈ ದೇಶದ ಮೇಲೆ ದಾಳಿ ನಡೆಸಲು ಇಮ್ರಾನ್ ಖಾನ್ ಫ್ಯಾಶಿಸ್ಟ್ ಯೋಜನೆಗಳನ್ನು ಹಾಕಿಕೊಂಡಿದ್ದರಿಂದ ಅದನ್ನು ವಿಫಲಗೊಳಿಸುವುದಕ್ಕಾಗಿ ಈ ಮೈತ್ರಿಕೂಟ ರಚನೆಯಾಗಿದೆ ’’ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News