ಲೈಂಗಿಕ ಕಿರುಕುಳ ಆರೋಪ: ಆಸ್ಕರ್ ವಿಜೇತ ನಿರ್ದೇಶಕ ಬಂಧನ

Update: 2022-06-20 02:46 GMT

ರೋಮ್ : ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ ಕೆನಡಾದ ಪೌಲ್ ಹಗ್ಗೀಸ್ ಅವರನ್ನು ಲೈಂಗಿಕ ಕಿರುಕುಳದ ಆರೋಪದಲ್ಲಿ ದಕ್ಷಿಣ ಇಟಲಿಯಲ್ಲಿ ಬಂಧಿಸಲಾಗಿದೆ ಎಂದು ndtv.com ವರದಿ ಮಾಡಿದೆ.

ವಿದೇಶಿ ಯುವತಿಯೊಬ್ಬಳ ಮೇಲೆ ತೀವ್ರ ಸ್ವರೂಪದ ಲೈಂಗಿಕ ಹಲ್ಲೆ ಮತ್ತು ತೀವ್ರ ವೈಯಕ್ತಿಕ ಗಾಯಪಡಿಸಿದ ಆರೋಪದಲ್ಲಿ ಈ ಚಿತ್ರ ನಿರ್ದೇಶಕ ಮತ್ತು ಚಿತ್ರಕಥೆ ಬರಹಗಾರನನ್ನು ಬಂಧಿಸಲಾಗಿದೆ ಎಂದು ಬ್ರಿಂಡ್ಸಿ ಪ್ರಾಸಿಕ್ಯೂಟರ್ಸ್ ಪ್ರಕಟಣೆ ಹೇಳಿದೆ.

ತಮ್ಮ ಇಟಲಿಯ ವಕೀಲ ಮೈಕಲ್ ಲಫೋರ್ಜಿಯಾ ಅವರ ಮೂಲಕ ಹೇಳಿಕೆ ನೀಡಿರುವ ಹಗ್ಗೀಸ್, ಈ ಆರೋಪವನ್ನು ಅಲ್ಲಗಳೆದಿದ್ದಾರೆ.

"ಶೀಘ್ರವಾಗಿ ತನಿಖೆ ನಡೆಸಿ, ನಾನು ಅಮಾಯಕ" ಎಂದು ಹಗ್ಗೀಸ್ ಹೇಳಿಕೆ ನೀಡಿರುವುದಾಗಿ ಏಜೆನ್ಸಿಗಳು ವರದಿ ಮಾಡಿವೆ. ಈ ಬಗ್ಗೆ ವಿವರವನ್ನು ಪೊಲೀಸರಾಗಲೀ, ಹಗ್ಗೀಸ್ ಕಡೆಯವರಾಗಲೀ ನೀಡಿಲ್ಲ.

ಹಗ್ಗೀಸ್ (69) ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರ "ಕ್ರ್ಯಾಷ್"ನ ಚಿತ್ರಕಥೆ ಬರೆದು ನಿರ್ದೇಶಿಸಿದ್ದರು. ಮಂಗಳವಾರ ಬ್ರಿಂಡ್ಸಿ ಪ್ರಾಂತ್ಯದ ಒಸ್ಟುನಿ ನಗರದಲ್ಲಿ ನಡೆಯುವ ಅಲ್ಲೋರಾ ಚಿತ್ರೋತ್ಸವದಲ್ಲಿ ಈ ಚಿತ್ರ ಭಾರಿ ಸುದ್ದಿ ಮಾಡಲಿದೆ ಎಂದು ನಿರೀಕ್ಷಿಸಲಾಗಿತ್ತು.

ಚಿತ್ರೋತ್ಸವಕ್ಕೆ ಆಗಮಿಸಿರುವ ಆರೋಪ ಮಾಡಿರುವ ಸಂತ್ರಸ್ತೆ ಮಹಿಳೆ ಹಗ್ಗೀಸ್ ಜತೆ ತಂಗಿದ್ದರು. ಕೆಲ ಸಮಯದ ಹಿಂದೆ ಪರಿಚಯವಾಗಿದ್ದ ಮಹಿಳೆಗೆ ಲೈಂಗಿಕ ಕ್ರಿಯೆ ನಡೆಸುವಂತೆ ಆರೋಪಿ ಬಲವಂತಪಡಿಸಿದ್ದಾಗಿ ಆಪಾದಿಸಲಾಗಿದೆ. ಒಮ್ಮೆ ಲೈಂಗಿಕ ಕ್ರಿಯೆ ನಡೆಸಿದ ಬಳಿಕ ಮಹಿಳೆ ವೈದ್ಯಕೀಯ ಆರೈಕೆ ಪಡೆಯುವುದು ಅನಿವಾರ್ಯವಾಯಿತು ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News