ರಾಹುಲ್ ಗಾಂಧಿ ಅಭಿಮಾನಿಯನ್ನು ತನ್ನ ಕಾರಿನಲ್ಲಿ ಪ್ರತಿಭಟನಾ ಸ್ಥಳಕ್ಕೆ ಕರೆದೊಯ್ದ ಪ್ರಿಯಾಂಕಾ ಗಾಂಧಿ

Update: 2022-06-20 10:43 GMT

ಹೊಸದಿಲ್ಲಿ : ತನ್ನ ಸಹೋದರ ಹಾಗೂ ಸಂಸದ ರಾಹುಲ್ ಗಾಂಧಿ ಅವರನ್ನು ಬೆಂಬಲಿಸಿ ತನಿಖಾ ಸಂಸ್ಥೆಯ ಆವರಣಕ್ಕೆ ನುಸುಳಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಕಾಂಗ್ರೆಸ್ ಕಾರ್ಯಕರ್ತನನ್ನು ಬಚಾವ್ ಮಾಡಿದ  ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಆತನನ್ನು ತಮ್ಮ ಕಾರಿನಲ್ಲಿ ಕುಳ್ಳಿರಿಸಿ ಜಂತರ್ ಮಂತರ್ ನತ್ತ ಕರೆದೊಯ್ದರು.

ಪ್ರಿಯಾಂಕಾ ಗಾಂಧಿ ಅವರು ಜಾರಿ ನಿರ್ದೇಶನಾಲಯದ ಕಚೇರಿ ಆವರಣದಿಂದ ಕಾರಿನಲ್ಲಿ ಹೊರಹೋಗುತ್ತಿದ್ದಾಗ ರಾಹುಲ್ ಗಾಂಧಿಯವರ ಪೋಸ್ಟರ್‌ನಲ್ಲಿ ತನ್ನನ್ನು ತಾನು ಹೊದ್ದುಕೊಂಡಿದ್ದ ಕಾರ್ಯಕರ್ತನನ್ನು  ಪೊಲೀಸರು ಕರೆದುಕೊಂಡು ಹೋಗುತ್ತಿರುವುದನ್ನು ಕಂಡರು.  ಕೂಡಲೇ ತನ್ನ ಕಾರನ್ನು ನಿಲ್ಲಿಸಿದ ಪ್ರಿಯಾಂಕಾ ಕಾರಿನೊಳಗೆ  ಬರುವಂತೆ ಕಾರ್ಯಕರ್ತನಿಗೆ  ತಿಳಿಸಿದರು.

 ಪ್ರಿಯಾಂಕಾ ಗಾಂಧಿ ತನ್ನ ಕಾರನ್ನು  ಹತ್ತುವಂತೆ ಸೂಚಿಸಿದಾಗ ಪೊಲೀಸರು ರಾಹುಲ್ ಗಾಂಧಿ ಬೆಂಬಲಿಗನನ್ನುಕಾರಿನ ಬಳಿ ಕರೆದುಕೊಂಡು ಹೋಗುತ್ತಿರುವುದು  ಸುದ್ದಿ ಸಂಸ್ಥೆ ಎಎನ್‌ಐ ಟ್ವೀಟ್ ಮಾಡಿರುವ ವೀಡಿಯೊದಲ್ಲಿ ಕಂಡುಬಂದಿದೆ. ಪ್ರಿಯಾಂಕಾ ಅವರು ಪಕ್ಷದ ಕಾರ್ಯಕರ್ತನನ್ನು  ಜಂತರ್ ಮಂತರ್‌ಗೆ ಕರೆದೊಯ್ದರು.  ಅಲ್ಲಿ ಕಾಂಗ್ರೆಸ್ ನಾಯಕರು 'ಸತ್ಯಾಗ್ರಹ'  ನಡೆಸುತ್ತಿದ್ದಾರೆ..

ಪ್ರಿಯಾಂಕಾ ಗಾಂಧಿ  ವಾದ್ರಾ  ಕೂಡಾ  ಜಂತರ್ ಮಂತರ್‌ಗೆ ತೆರಳಿದರು. ಅಲ್ಲಿ ಕಾಂಗ್ರೆಸ್ ನಾಯಕರು ಹಾಗೂ  ಕಾರ್ಯಕರ್ತರು ಅಗ್ನಿಪಥ್ ನೇಮಕಾತಿ ಯೋಜನೆ ಹಾಗೂ  ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ಪ್ರಶ್ನಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.

"ನಾಳೆ ದೇಶಾದ್ಯಂತ ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರು ಯುವ ವಿರೋಧಿ ಅಗ್ನಿಪಥ ಯೋಜನೆ ವಿರುದ್ಧ ಮತ್ತು ನಮ್ಮ ನಾಯಕ, ಸಂಸದ ರಾಹುಲ್ ಗಾಂಧಿ ಗುರಿಯಾಗಿಸಿಕೊಂಡು ಮೋದಿ ಸರಕಾರದ ಸೇಡಿನ ರಾಜಕಾರಣದ ವಿರುದ್ಧ ಶಾಂತಿಯುತ ಪ್ರತಿಭಟನೆಗಳನ್ನು ಮುಂದುವರೆಸುತ್ತಾರೆ. ಕಾಂಗ್ರೆಸ್ ನಿಯೋಗವು ಸಂಜೆ ಗೌರವಾನ್ವಿತ ರಾಷ್ಟ್ರಪತಿ ಅವರನ್ನು ಭೇಟಿ ಮಾಡಲಿದೆ" ಎಂದು ಪಕ್ಷದ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News