ನಾಟಕದ ಮೂಲಕ ಐತಿಹಾಸಿಕ ಸತ್ಯದ ಅನಾವರಣ - ಸಚಿವ ಸುನೀಲ್ ಕುಮಾರ್

Update: 2022-06-20 17:47 GMT

ಕಾರ್ಕಳ : ನಮ್ಮ ದೇಶದ ನೈಜ ಇತಿಹಾಸ ಮುಚ್ಚಿಟ್ಟು ಯಾವುದೋ ಸ್ವಾರ್ಥಕ್ಕಾಗಿ ವಿಷಯವನ್ನು ತಿರುಚಿ ಪಠ್ಯದಲ್ಲಿ ಸೇರಿಸಿ ಮಕ್ಕಳಿಗೆ ಬೋಧನೆ ಮಾಡಲಾಯಿತು. ಅದನ್ನೆಲ್ಲ ಇನ್ನು ಸಹಿಸಲಸಾಧ್ಯ. ಪಠ್ಯ, ನಾಟಕ, ನೃತ್ಯದ ಮೂಲಕ ನಮ್ಮ ದೇಶದ ನಿಜವಾದ ಇತಿಹಾಸವನ್ನು ಸಮಾಜದ ಮುಂದಿಡುತ್ತೇವೆ. ಇದಕ್ಕೆ ಸರಕಾರ ಬದ್ಧವಾಗಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಹೇಳಿದರು. 

ಅವರು ಶ್ರೀ ಭುವನೇಂದ್ರ ಕಾಲೇಜಿನ ಸಭಾಂಗಣದಲ್ಲಿ ಯಕ್ಷ ರಂಗಾಯಣ ಕಾರ್ಕಳದ ಚೊಚ್ಚಲ ನಾಟಕ "ಅಮರ ಕ್ರಾಂತಿ ಸ್ವಾಂತ್ರ್ಯ ಹೋರಾಟ - 1837' ಉದ್ಘಾಟಿಸಿ ಮಾತನಾಡಿದರು.

ಬ್ರಿಟಿಷರು ಭಾರತವನ್ನು ಬಿಟ್ಟು ತೊಲಗಲು ಕೇವಲ ಸತ್ಯಾಗ್ರಹ ಮಾತ್ರ ಕಾರಣವಾಗಿರಲಿಲ್ಲ. ಕ್ರಾಂತಿಕಾರಿಗಳ ಹೋರಾಟವು ಕೂಡ ಭಾರತದ ಸ್ವಾತಂತ್ರ್ಯದ ಇತಿಹಾಸದಲ್ಲಿ ಮುಖ್ಯ ಪಾತ್ರ ವಹಿಸಿದೆ. ಅದನ್ನು ಪಠ್ಯದ ಮೂಲಕ ತಿಳಿಸಿಕೊಡುವ ಕಾರ್ಯವಾಗಬೇಕೆಂದು ಸುನೀಲ್‌ ಕುಮಾರ್‌ ಅಭಿಪ್ರಾಯಪಟ್ಟರು. 

ಖ್ಯಾತ ಸಾಹಿತಿ, ಅಮರ ಕ್ರಾಂತಿ ಸ್ವಾತಂತ್ರ್ಯ ಹೋರಾಟ - 1837 ನಾಟಕದ ಲೇಖಕ ಡಾ. ಪ್ರಭಾಕರ ಶಿಶಿಲ, ಕರಾವಳಿಯ ಸ್ವಾತಂತ್ರ್ಯ ಹೋರಾಟದ ನೆನಪು ಕುರಿತು ವಿಶೇಷ ಉಪನ್ಯಾಸ ನೀಡಿದರು. ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ನಡೆದ ಮೂರು ಹೋರಾಟಗಳು ಬಹಳ ಪ್ರಮುಖವಾದವುಗಳು. ತುಳುನಾಡಿನ ರಾಣಿ ಅಬ್ಬಕ್ಕ ಈ ನೆಲದ ಸ್ವಾತಂತ್ರ್ಯಕ್ಕಾಗಿ ಪೋರ್ಚುಗೀಸರ ವಿರುದ್ಧ ಹೋರಾಡಿದಳು. ಕಾರ್ಕಳದ ಎಂ ಡಿ. ಅಧಿಕಾರಿ, ಕಾರ್ನಾಡ್ ಸದಾಶಿವ ರಾವ್ ಹೀಗೆ ಕರಾವಳಿಯ ಹೋರಾಟಗಾರರ ಕುರಿತು ದಾಖಲೀಕರಣ ಮಾಡುವ ಅಗತ್ಯವಿದೆಯೆಂದರು. 

ಕಾರ್ಕಳದ ಕೋಟಿ ಚೆನ್ನಯ್ಯ ಥೀಂ ಪಾರ್ಕ್‌ಗೆ ಭೇಟಿ ನೀಡಿದ ನಂತರ ನನ್ನ ಮನಸ್ಸೇ ಬದಲಾಯಿತು. ಸಚಿವ ಸುನಿಲ್ ಕುಮಾರ್ ಅವರ ಮೇಲಿನ ನನ್ನ ಭಾವನೆಯೇ ಬದಲಾಯಿತು. ಸ್ವಾತಂತ್ರ್ಯ ಎಂದರೆ ಹಕ್ಕು ಮತ್ತು ಅಧಿಕಾರ ಅನುಭವಿಸಲು ಇರುವ ಸ್ಥಿತಿ. ಸ್ವಾತಂತ್ರ್ಯಕ್ಕಿಂತ ದೊಡ್ಡ ಮೌಲ್ಯವಿಲ್ಲ. ಭಾರತೀಯತೆಯನ್ನು ಅಳವಡಿಸಿ ಸ್ವಾತಂತ್ರ್ಯವನ್ನು ನಾವು ಅನುಭವಿಸಬೇಕು. ಅಖಂಡ ಭಾರತ ನನ್ನ ಕನಸು. ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ನಡೆದ ಘಟನೆ ಸ್ವಾತಂತ್ರ್ಯದ ಹರಣ ಎಂದು ಡಾ. ಪ್ರಭಾಕರ ಶಿಶಿಲ ನುಡಿದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯಕ್ಷ ರಂಗಾಯಣ ಕಾರ್ಕಳದ ನಿರ್ದೇಶಕ ಜೀವನ ರಾಮ್ ಸುಳ್ಯ ಮಾತನಾಡಿ, ನಾನೊಬ್ಬ ಕಲಾವಿದ. ಕಲೆ ನನಗೆ ದೇವರು. ಎಡಬಲಗಳನ್ನು ಮೀರಿದವನೆ ನಿಜವಾದ ಕಲಾವಿದ. ಒಂದು ನಾಟಕವನ್ನು ವೇದಿಕೆಗೆ ತರುವಾಗ ಹಲವಾರು ಸವಾಲುಗಳನ್ನು ಎದುರಿಸಬೇಕಾಗುವುದು. ನನ್ನ ನಿಷ್ಠೆ ಕಲೆಗೆ ಮಾತ್ರ. ಕಾರ್ಕಳದ ಯಕ್ಷರಂಗಾಯಣವು ಮುಂದಿನ ದಿನಗಳಲ್ಲಿ ಅನೇಕ ಮೌಲ್ವಿಕವಾದ ಕಾರ್ಯಕ್ರಮ ನೀಡಲಿದೆ ಎಂದರು. 
  
ಕಾರ್ಕಳ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ ಎ. ಕೋಟ್ಯಾನ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ನೂತನ ನಾಟಕಕ್ಕೆ ಶುಭಹಾರೈಸಿದರು. ಯಕ್ಷ ರಂಗಾಯಣ ಕಾರ್ಕಳದ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ಸ್ವಾಗತಿಸಿದರು. ಶಿಕ್ಷಕ ರಾಜೇಂದ್ರ ಭಟ್ ಕೆ. ಕಾರ್ಯಕ್ರಮ ನಿರೂಪಿಸಿ, ವಸಂತ ಎಂ. ವಂದಿಸಿದರು.

ಅಮರ ಕ್ರಾಂತಿ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದವರು ಕೆದಂಬಾಡಿ ರಾಮ ಗೌಡ, ಕಲ್ಯಾಣ ಸ್ವಾಮಿ ನಾಮಾಂಕಿತ ಪುಟ್ಟ ಬಸವ, ಹುಲಿ ಕಡಿದ ನಂಜಯ್ಯ, ಗುಡ್ಡೆ ಮನೆ ಅಪ್ಪಯ್ಯ. 1837 ಮಾರ್ಚ್‌ 30ರಂದು ಸುಳ್ಯ ದಿಂದ ಆರಂಭವಾದ ಈ ರೈತ ಹೋರಾಟ ಎಪ್ರಿಲ್‌ 5ರಂದು ಮಂಗಳೂರಿನಲ್ಲಿ ಬ್ರಿಟಿಷ್‌ ಧ್ವಜವನ್ನು ಕೆಳಗಿಳಿಸುವುದರೊಂದಿಗೆ ಮುಕ್ತಾಯವಾಗುವುದು. ಈ ರೋಮಾಂಚಕ ಘಟನೆಯನ್ನು ನಾಟಕದಲ್ಲಿ ಅತ್ಯಂತ ಮನೋಜ್ಞವಾಗಿ ಕಟ್ಟಿಕೊಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News