ಲಂಚ ಪಡೆದ ಆರೋಪ: ಬಯೋಕಾನ್ ಬಯೋಲಾಜಿಕ್ಸ್ ಎಕ್ಸಿಕ್ಯೂಟಿವ್ ಸೇರಿದಂತೆ ಐವರನ್ನು ಬಂಧಿಸಿದ ಸಿಬಿಐ

Update: 2022-06-22 18:15 GMT

ಹೊಸದಿಲ್ಲಿ, ಜೂ. ೨೨: ಲಂಚ ಪ್ರಕರಣಕ್ಕೆ ಸಂಬಂಧಿಸಿ ಜೈವಿಕ ತಂತ್ರಜ್ಞಾನ ಸಂಸ್ಥೆ ಬಯೋಕಾನ್ ಬಯಾಲಜಿಕ್ಸ್‌ನ ಹಿರಿಯ ಕಾರ್ಯ ನಿರ್ವಹಣಾಧಿಕಾರಿ ಸೇರಿದಂತೆ ಐವರನ್ನು ಸಿಬಿಐ ಮಂಗಳವಾರ ಬಂಧಿಸಿದೆ.

ಸೋಮವಾರ ೪ ಲಕ್ಷ ರೂಪಾಯಿ ಲಂಚ ಸ್ವೀಕರಿಸುವ ಸಂದರ್ಭ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ಜಂಟಿ ಔಷಧ ನಿಯಂತ್ರಣಾಧಿಕಾರಿ ಇ. ಈಶ್ವರ ರೆಡ್ಡಿ ಅವರನ್ನು ಬಂಧಿಸಲಾಗಿದೆ ಎಂದು ಸಿಬಿಐ ಹೇಳಿದೆ. ಅವರಲ್ಲಿ ಬಯೋಕಾನ್ ಬಯಾಲಜಿಕ್ಸ್‌ನ ೩ ಕಡತಗಳು ಬಾಕಿ ಇತ್ತು. ಆ ಕಡತಗಳಿಗೆ ಅನುಮೋದನೆ ನೀಡಲು ಲಂಚ ನೀಡುವ ಬಗ್ಗೆ ಮಾತುಕತೆ ನಡೆಯುತ್ತಿತ್ತು ಎಂದು ಸಿಬಿಐ ಹೇಳಿದೆ.

ಸಿಬಿಐ ಮಂಗಳವಾರ ರೆಡ್ಡಿ, ಬಯೋಕಾನ್ ಬಯಾಲಾಜಿಕ್ಸ್‌ನ ಸಹಾಯಕ ಉಪಾಧ್ಯಕ್ಷ ಎಲ್. ಪ್ರವೀಣ್ ಕುಮಾರ್, ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ಸಹಾಯಕ ಔಷಧ ಇನ್ಸ್‌ಪೆಕ್ಟರ್ ಅನಿಮೇಶ್ ಕುಮಾರ್, ಸಿನರ್ಜಿ ನೆಟ್‌ವರ್ಕ್ ಇಂಡಿಯಾದ ನಿರ್ದೇಶಕ ದಿನೇಶ್ ದುವಾ ಹಾಗೂ ಬಯೋಇನ್ನೋವೇಟ್ ರಿಸರ್ಚ್ ಸರ್ವೀಸಸ್‌ನ ಗುಲ್ಜಿತ್ ಸೇಥಿ ಆಲಿಯಾಸ್ ಗುಲ್ಜಿತ್ ಚೌಧರಿ ಅವರನ್ನು ಬಂಧಿಸಿದೆ.

ಬಯೋಕಾನ್‌ನ ನಿಯಂತ್ರಣ ವ್ಯವಹಾರಗಳನ್ನು ಬಯೋಇನ್ನೋವೇಟ್ ನಿರ್ವಹಿಸುತ್ತಿತ್ತು. ಅಲ್ಲದೆ, ಅನುಮತಿ ಪಡೆಯಲು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಗೆ ನಿರಂತರ ಲಂಚ ನೀಡುತ್ತಿತ್ತು.  ಬಯೋಇನ್ನೋವೇಟ್ ಸಿನರ್ಜಿ ನೆಟ್‌ವರ್ಕ್‌ನೊಂದಿಗೆ ವ್ಯವಹಾರ ಒಪ್ಪಂದ ಮಾಡಿಕೊಂಡಿದೆ.  ಅಲ್ಲದೆ, ರೆಡ್ಡಿಗೆ ಲಂಚ ನೀಡುವಂತೆ ಸೇಥಿ ದುವಾ ಅವರಲ್ಲಿ ವಿನಂತಿಸಿದ್ದರು. ಬಯೋಇನ್ನೋವೇಟ್ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ಅಧಿಕಾರಿಗೆ ೯ ಲಕ್ಷ ರೂಪಾಯಿ ಲಂಚ ನೀಡಿದೆ ಎನ್ನಲಾಗಿದೆ. ಇದರಿಂದ ಬಯೋಕಾನ್‌ನ ಇನ್ಸುಲಿನ್ ಆಸ್ಪರ್ಟ್ ಇಂಜೆಕ್ಷನ್‌ನ ಮೂರನೇ ಹಂತದ ಟ್ರಯಲ್‌ಗೆ ಮನ್ನಾ ನೀಡಲಾಗಿತ್ತು ಎಂದು ಸಿಬಿಐ ತಿಳಿಸಿದೆ.

ಲಂಚದ ಆರೋಪವನ್ನು ಬಯೋಕಾನ್ ಕಾರ್ಯಾಧ್ಯಕ್ಷೆ ಕಿರಣ್ ಮಜುಂದಾರ್-ಶಾ ಅವರು ನಿರಾಕರಿಸಿದ್ದಾರೆ. ‘‘ನಮ್ಮ ಎಲ್ಲಾ ಉತ್ಪಾದನೆಗಳಿಗೆ ದೊರಕಿದ ಅನುಮತಿ ನ್ಯಾಯಬದ್ಧವಾಗಿವೆ. ಇದಕ್ಕೆ ವಿಜ್ಞಾನ ಹಾಗೂ ಕ್ಲಿನಿಕಲ್ ದತ್ತಾಂಶದ ಬೆಂಬಲ ಇದೆ’’ ಎಂದು ಅವರು ಹೇಳಿದ್ದಾರೆ.

‘‘ನಮ್ಮ ಇನ್ಸುಲಿನ್ ಇಂಜೆಕ್ಸ್‌ನಗೆ ಯುರೋಪ್ ಹಾಗೂ ಇತರ ಹಲವು ದೇಶಗಳು ಅನುಮೋದನೆ ನೀಡಿವೆ. ಭಾರತದಲ್ಲಿ ನಿಯಂತ್ರಣ ಪ್ರಕ್ರಿಯೆ ಆನ್‌ಲೈನ್‌ನಲ್ಲಿ ನಡೆಯುತ್ತದೆ. ಎಲ್ಲ ಸಭೆಯ ಲಿಖಿತ ದಾಖಲೆ ವೆಬ್‌ಸೈಟ್‌ನಲ್ಲಿ ಲಭ್ಯವಿವೆ’’ ಎಂದು ಅವರು ತಿಳಿಸಿದ್ದಾರೆ.

ಕಂಪೆನಿ ಹಾಗೂ ತನ್ನ ಅಧಿಕಾರಿಗಳ ವಿರುದ್ಧದ ಲಂಚ ಆರೋಪವನ್ನು ಬಯೋಕಾನ್ ಬಯಾಲಾಜಿಕ್ಸ್ ನಿರಾಕರಿಸಿದೆ. ನಾಲ್ಕನೇ ಹಂತದ ಟ್ರಯಲ್ ಅನ್ನು ನಡೆಸುವ ಬದ್ಧತೆಯ ಆಧಾರದ ಮೇಲೆ ಅಗತ್ಯತೆಗಳನ್ನು ಮನ್ನಾ ಮಾಡಬಹುದು ಎಂಬ ನಿಯಂತ್ರಣ  ಮಾರ್ಗಸೂಚಿಗಳನ್ನು ಆಧರಿಸಿ ೩ನೇ ಹಂತದ ಟ್ರಯಲ್‌ಗೆ ಮನ್ನಾ ಮಾಡುವಂತೆ ಸಂಸ್ಥೆ ಕೋರಿತ್ತು. ೪ನೇ ಹಂತದ ಪ್ರಯೋಗವನ್ನು ಕೇಂದ್ರ ನಿಯಂತ್ರಣ ಸಂಸ್ಥೆ ಇನ್ನಷ್ಟೇ ಅನುಮೋದಿಸಬೇಕು ಎಂದು ಬಯೋಕಾನ್ ಬಯಲಾಜಿಕ್ಸ್ ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News