ಬುಲ್ಲಿ ಬಾಯಿ, ಸಲ್ಲಿ ಡೀಲ್ಸ್ ಪ್ರಕರಣ: ಮೂವರು ಆರೋಪಿಗಳಿಗೆ ಜಾಮೀನು, ಎಲ್ಲ ಆರೋಪಿಗಳೂ ಜೈಲಿನಿಂದ ಹೊರಗೆ

Update: 2022-06-22 18:18 GMT

ಹೊಸದಿಲ್ಲಿ, ಜೂ. 22: ‘ಬುಲ್ಲಿ ಬಾಯಿ’/‘ಸಲ್ಲಿ ಡೀಲ್ಸ್’ ಪ್ರಕರಣದಲ್ಲಿ ಕಸ್ಟಡಿಯಲ್ಲಿದ್ದ ಮೂವರು ಆರೋಪಿಗಳಿಗೆ ಮುಂಬೈ ಸೆಷನ್ಸ್ ನ್ಯಾಯಾಲಯ ಮಂಗಳವಾರ ಜಾಮೀನು ನೀಡಿದೆ.

ಈ ಪ್ರಕರಣಗಳಿಗೆ ಸಂಬಂಧಿಸಿ ಈ ವರ್ಷದ ಆರಂಭದಲ್ಲಿ ಮೂವರು ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿತ್ತು. ಇದರೊಂದಿಗೆ ಎಲ್ಲ ಆರೋಪಿಗಳಿಗೆ ಜಾಮೀನು ದೊರಕಿದಂತಾಗಿದೆ.

ವಿಷಯ ಹಂಚಿಕೆ ವೇದಿಕೆ ಗೀಟಾ ಹಬ್‌ನಲ್ಲಿ 2021 ಜುಲೈಯಲ್ಲಿ ಪ್ರಚಾರಕ್ಕೆ ಬಂದ ‘ಸಲ್ಲಿ ಡೀಲ್ಸ್’ ಪ್ರಮುಖ ಮುಸ್ಲಿಂ ಮಹಿಳೆಯರ ತಿರುಚಿದ ಚಿತ್ರಗಳನ್ನು ಅವರ ಅನುಮತಿ ಇಲ್ಲದೆ ಅವಹೇಳನಕಾರಿ ಹೇಳಿಕೆಯೊಂದಿಗೆ ಅಪ್‌ಲೋಡ್ ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಆದರೆ, ಆರೋಪಿಗಳನ್ನು ಕೂಡಲೇ ಬಂಧಿಸಿರಲಿಲ್ಲ.

ಅನಂತರ ಈ ವರ್ಷ ಜನವರಿಯಲ್ಲಿ ‘ಸಲ್ಲಿ ಡೀಲ್ಸ್’ ಅನ್ನೇ  ಹೋಲುವ ‘ಬುಲ್ಲಿ ಬಾಯಿ’ ಆ್ಯಪ್ ಕಂಡು ಬಂದಿತ್ತು. ಅಲ್ಲದೆ ಪ್ರಮುಖ ಮುಸ್ಲಿಂ ಮಹಿಳೆಯರನ್ನು ಹರಾಜಿಗೆ ಇರಿಸಿತ್ತು. ದೂರು ದಾಖಲಾದ ಹಾಗೂ  ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಈ ಎರಡೂ ಪ್ರಕರಣದಲ್ಲಿ ಪೊಲೀಸರು ಮೊದಲಿಗೆ ಓರ್ವನನ್ನು ಬಂಧಿಸಿದ್ದರು.

ಅನಂತರ ಎರಡೂ ಪ್ರಕರಣಗಳಲ್ಲಿ ಒಟ್ಟು 6 ಮಂದಿಯನ್ನು ಬಂಧಿಸಲಾಗಿತ್ತು. ಇದರಲ್ಲಿ ‘ಸಲ್ಲಿ ಡೀಲ್ಸ್’ ಆ್ಯಪ್‌ನ ಸೃಷ್ಟಿಕರ್ತನೆಂದು  ಹೇಳಲಾಗುತ್ತಿರುವ ಓಂಕಾರೇಶ್ವರ ಠಾಕೂರ್,  ‘ಬುಲ್ಲಿ ಬಾಯಿ’ ಆ್ಯಪ್‌ನ ಸೃಷ್ಟಿಕರ್ತ ಎಂದು ಹೇಳಲಾಗುತ್ತಿರುವ ನೀರಜ್ ಬಿಷ್ಣೋ ಹಾಗೂ ವಿಶಾಲ್ ಕುಮಾರ್ ಝಾ, ಶ್ವೇತಾ ಸಿಂಗ್, ಮಾಯಾಂಕ್ ಅಗರ್ವಾಲ್ ಹಾಗೂ ನೀರಜ್ ಸಿಂಗ್ ಸೇರಿದ್ದರು. 

ಈ ಆರೋಪಿಗಳಲ್ಲಿ ಜಾ, ಸಿಂಗ್ ಹಾಗೂ ಅಗರ್ವಾಲ್‌ಗೆ ಬಾಂದ್ರಾದ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾಮೀನು ನೀಡಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News