ದಲಿತ ಝೊಮ್ಯಾಟೋ ಡೆಲಿವರಿ ಏಜಂಟ್‌ ಮುಖಕ್ಕೆ ಉಗುಳಿ ಹಲ್ಲೆಗೈದ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Update: 2022-06-22 09:52 GMT

ಹೊಸದಿಲ್ಲಿ: ಝೊಮ್ಯಾಟೋ ಡೆಲಿವರಿ ಏಜಂಟ್‌ ಒಬ್ಬ ದಲಿತನೆಂದು ತಿಳಿದು ಬರುತ್ತಲೇ ಗ್ರಾಹಕನೊಬ್ಬ ಹಾಗೂ ಇತರರು ಆತನ ಮುಖಕ್ಕೆ ಉಗುಳಿ ಆತನಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ನೋ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ದಲಿತ ಝೊಮ್ಯಾಟೋ ಡೆಲಿವರಿ ಏಜಂಟ್‌ ಕೈಯಿಂದ ಆರ್ಡರ್‌ ಸ್ವೀಕರಿಸುವುದಿಲ್ಲ ಎಂದು ಹೇಳಿದ್ದ ಗ್ರಾಹಕ ಆತನ ಜಾತಿ ನಿಂದನೆಗೈದಿದ್ದ. ಗ್ರಾಹಕ ಏಜಂಟನ ಜಾತಿಯನ್ನು ಕೇಳಿದ್ದನೆನ್ನಲಾಗಿದ್ದು ಆಗ ಆತ ಪಾಸಿ ಸಮುದಾಯದವನೆಂದು ತಿಳಿಸಿದ್ದ. ಪಾಸಿ ಸಮುದಾಯವು ಉತ್ತರ ಪ್ರದೇಶದಲ್ಲಿ ದಲಿತ ಎಂದು ಪರಿಗಣಿಸಲ್ಪಟ್ಟಿದೆ.

ಲಕ್ನೋದ ಸೆಕ್ಟರ್‌ ಎಚ್‌, ಆಶಿಯಾನ ಪ್ರದೇಶದಲ್ಲಿ ಘಟನೆ ಕಳೆದ ಶಿನಿವಾರ ನಡೆದಿತ್ತು. ಅಲ್ಲಿ ಆರ್ಡರ್‌ ತಲುಪಿಸಲೆಂದು ಝೊಮ್ಯಾಟೋ ಡೆಲಿವರಿ ಏಜಂಟ್ ವಿನೀತ್‌ ಕುಮಾರ್‌ ರಾವತ್‌ ತೆರಳಿದ್ದರು. ಆದರೆ ಆತ ಗ್ರಾಹಕನ ಮನೆ ತಲುಪಿದಾಗ  ಗ್ರಾಹಕ ಹೆಸರು ಕೇಳಿ ಜಾತಿ ನಿಂದನೆಗೈದಿದ್ದ ಬಾಯಲ್ಲಿದ್ದ ತಂಬಾಕನ್ನು ಆತನ ಮುಖಕ್ಕೆ ಉಗುಳಿ ಹಲ್ಲೆ ನಡೆಸಿದ್ದ ನಂತರ ಮನೆಯೊಳಗಿನಿಂದ ಬಂದ 10-12 ಮಂದಿ ಆತನಿಗೆ ಥಳಿಸಿದ್ದರು ಆದರೆ ಹೆಲ್ಮೆಟ್‌ ಧರಿಸಿದ್ದರಿಂದ ತಲೆಗೆ ಗಾಯಗಳಾಗಿಲ್ಲದೇ ಇದ್ದರೂ ದೇಹದ ಇತರ ಭಾಗಗಳಿಗೆ ಗಾಯಗಳುಂಟಾಗಿವೆ. ನಂತರ ಆತನ ಬೈಕ್‌ ಅನ್ನು ಆರೋಪಿಗಳು ವಶಕ್ಕೆ ಪಡೆದುಕೊಂಡಿದ್ದರೆನ್ನಲಾಗಿದೆ.

ಮನೆಯಲ್ಲಿದ್ದ ಅಜಯ್‌ ಸಿಂಗ್‌ ಮತ್ತಾತನ ಕೆಲಸದಾಳು ವಿವೇಕ್‌ ಶುಕ್ಲಾ ಎಂಬವರನ್ನು ಬಂಧಿಸಲಾಗಿದೆ. ಇತರ 12 ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News