ಏಕನಾಥ್ ಶಿಂಧೆಗೇ ಸಿಎಂ ಪಟ್ಟ ಕಟ್ಟಲು ಮುಂದಾದ ಮೈತ್ರಿಕೂಟ !

Update: 2022-06-23 04:17 GMT
ಏಕನಾಥ್ ಶಿಂಧೆ (Photo: Facebook)

ಮುಂಬೈ: ಮಹಾರಾಷ್ಟ್ರದಲ್ಲಿ ಉದ್ಭವಿಸಿರುವ ರಾಜಕೀಯ ಬಿಕ್ಕಟ್ಟು ಶಮನಕ್ಕಾಗಿ ಭಿನ್ನಮತೀಯ ನಾಯಕ ಏಕನಾಥ್ ಶಿಂಧೆ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವುದು ಸೂಕ್ತ ಎಂಬ ಸಲಹೆಯನ್ನು ಮಹಾ ವಿಕಾಸ ಅಗಾಡಿ ಘಟಕ ಪಕ್ಷಗಳಾದ ಕಾಂಗ್ರೆಸ್ ಹಾಗೂ ಎನ್‍ಸಿ ಸಲಹೆ ಮಾಡಿವೆ ಎಂದು ndtv ವರದಿ ಮಾಡಿದೆ.

ಸಿಎಂ ಉದ್ಧವ್ ಠಾಕ್ರೆ ಈಗಾಗಲೇ ರಾಜೀನಾಮೆ ನೀಡಲು ಸಿದ್ಧ ಎಂದು ಘೋಷಿಸಿದ್ದಲ್ಲದೇ, ಅಧಿಕೃತ ನಿವಾಸವನ್ನು ತೆರವು ಮಾಡಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಆದರೆ ಮುಂದಿನ ಮುಂದಿನ ಮುಖ್ಯಮಂತ್ರಿ ಶಿವಸೇನೆಯವರಾಗಿರುತ್ತಾರೆಯೇ ಎಂದು ಬಂಡಾಯ ಮುಖಂಡ ಏಕನಾಥ್ ಶಿಂಧೆ ಅವರಿಗೆ ಠಾಕ್ರೆ ಸವಾಲು ಹಾಕಿದ್ದಾರೆ.

ಆದರೆ ಪಕ್ಷ ಹಾಗೂ ಕಾರ್ಯಕರ್ತರನ್ನು ಉಳಿಸುವ ಸಲುವಾಗಿ ಎನ್‍ಸಿಪಿ ಮತ್ತು ಕಾಂಗ್ರೆಸ್ ಜತೆಗಿನ ಅಸಹಜ ಮೈತ್ರಿಯಿಂದ ಶಿವಸೇನೆ ಹೊರಬರಬೇಕು ಎನ್ನುವುದು ಶಿಂಧೆಯವರ ಸ್ಪಷ್ಟ ಅಭಿಪ್ರಾಯ. ಏತನ್ಮಧ್ಯೆ ಮತ್ತೆ ಮೂವರು ಶಿವಸೇನೆ ಶಾಸಕರು ಗುವಾಹತಿಗೆ ಖಾಸಗಿ ವಿಮಾನದಲ್ಲಿ ಬಂದಿಳಿದಿದ್ದು, ಶಿಂಧೆ ಬಣ ಸದ್ಯಕ್ಕೆ 33 ಶಾಸಕರನ್ನು ಹೊಂದಿದೆ. ಐವರು ಪಕ್ಷೇತರ ಶಾಸಕರೂ ಶಿಂಧೆ ಜತೆಗಿದ್ದಾರೆ. ಆದರೆ 17 ಮಂದಿ ಶಿವಸೇನೆ ಶಾಸಕರು ಮುಂಬೈಗೆ ವಾಪಸ್ಸಾಗಲು ಸಿದ್ಧರಿದ್ದಾರೆ ಎಂದು ಆಡಳಿತಾರೂಢ ಮೈತ್ರಿಕೂಟ ಹೇಳಿಕೊಂಡಿದೆ.

ನಾಲ್ವರು ಪಕ್ಷೇತರರೂ ಸೇರಿದಂತೆ ಶಿಂಧೆ ಬಣದ 34 ಶಾಸಕರು ಶಿಂಧೆ ತಮ್ಮ ನಾಯಕ ಎಂದು ವಿವರಿಸಿ ರಾಜ್ಯಪಾಲರಿಗೆ ಮತ್ತು ಉಪ ಸ್ಪೀಕರ್‍ಗೆ ಪತ್ರ ಬರೆದಿದ್ದಾರೆ. ಕೋವಿಡ್-19 ಸೋಂಕಿನಿಂದ ಬಳಲುತ್ತಿರುವ ರಾಜ್ಯಪಾಲರ ಜತೆ ಶಿಂಧೆ ಗುರುವಾರ ಆನ್‍ಲೈನ್ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಏತನ್ಮಧ್ಯೆ ವಿಧಾನಸಭೆಯಲ್ಲಿ 106 ಸದಸ್ಯಬಲ ಹೊಂದಿರುವ ಬಿಜೆಪಿಯಲ್ಲೂ ಬಿರುಸಿನ ಚಟುವಟಿಕೆಗಳು ಆರಂಭವಾಗಿದ್ದು, ಪಕ್ಷದ ಮುಖಂಡ ದೇವೇಂದ್ರ ಫಡ್ನವೀಶ್ ಅವರು ಪಕ್ಷದ ಮುಖಂಡರ ಜತೆ ಚರ್ಚೆ ನಡೆಸಿದ್ದಾರೆ. ಬಿಜೆಪಿಗೆ 37 ಸದಸ್ಯರ ಅಗತ್ಯತೆ ಇದ್ದು, ಶಿಂಧೆ ಬಣ ಪಕ್ಷಾಂತರ ನಿಷೇಧ ಕಾಯ್ದೆಯ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಅಗತ್ಯವಿರುವ 37 ಶಾಸಕರನ್ನು ಹೊಂದಿದರೆ ಬಿಜೆಪಿಯ ಹಾದಿ ಸುಗಮವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News