ಲ್ಯಾಂಡ್‌ ಆಗುತ್ತಿದ್ದಂತೆಯೇ ವಿಮಾನದಲ್ಲಿ ಆಕಸ್ಮಿಕ ಬೆಂಕಿ: ಚೆಲ್ಲಾಪಿಲ್ಲಿಯಾಗಿ ಓಡಿದ ಪ್ರಯಾಣಿಕರು

Update: 2022-06-23 10:10 GMT

ಮಿಯಾಮಿ: ಮಿಯಾಮಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡುತ್ತಿದ್ದಂತೆಯೇ ವಿಮಾನವೊಂದಕ್ಕೆ ಬುಧವಾರ ಬೆಂಕಿ ಹತ್ತಿಕೊಂಡ ಘಟನೆಯ ಬಗ್ಗೆ ತನಿಖೆ ನಡೆಸಲು ಅಧಿಕಾರಿಗಳು ಆಗಮಿಸಿದ್ದಾರೆ. ವಿಮಾನಕ್ಕೆ ಬೆಂಕಿ ಹತ್ತಿಕೊಳ್ಳುತ್ತಿರುವಂತೆಯೇ 100ಕ್ಕೂ ಅಧಿಕ ಪ್ರಯಾಣಿಕರು ಭೀತಿಯಿಂದ ಚೆಲ್ಲಾಪಿಲ್ಲಿಯಾಗಿ ಓಡುತ್ತಿರುವ ಚಿತ್ರಣದ ಭಯಾನಕ ವೀಡಿಯೋವನ್ನು ಅಲ್ಲಿದ್ದವರೊಬ್ಬರು ಸೆರೆ ಹಿಡಿದಿದ್ದಾರೆ.

ಘಟನೆ ಮಂಗಳವಾರ ನಡೆದಿದ್ದು ರೆಡ್‌ ಏರ್‌ ಫ್ಲೈಟ್‌ 203 ವಿಮಾನದಲ್ಲಿ ಈ ಅವಘಡ ಸಂಭವಿಸಿತ್ತು. ಘಟನೆಯಲ್ಲಿ ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.

ಈ ಘಟನೆಯ ಭಯಾನಕ ವೀಡಿಯೋದಲ್ಲಿ  ವಿಮಾನದ ಮೂತಿ ತಿರುವಿರುವುದು ಹಾಗೂ ಬೆಂಕಿ ಹತ್ತಿಕೊಂಡಾಗ ಪ್ರಯಾಣಿಕರು ಓಡುತ್ತಿರುವುದು ಹಾಗೂ ಕಪ್ಪು ಹೊಗೆ ಅಲ್ಲಿ ಆವರಿಸಿರುವುದು ಕಾಣಿಸುತ್ತದೆ.

ವಿಮಾನದ ಎಡ ಬದಿಯ ಪ್ರಮುಖ ಲ್ಯಾಂಡಿಂಗ್‌ ಗೇರ್‌ ಕುಸಿದಿದ್ದೇ ಈ ಘಟನೆಗೆ ಕಾರಣವೆನ್ನಲಾಗಿದ್ದು ಇದಾದ ಬೆನ್ನಲ್ಲೇ ರನ್‌-ವೇಯಲ್ಲಿ ವಿಮಾನ ಟ್ರ್ಯಾಕ್‌ ಬದಲಿಸಿತ್ತು ಅಂತಿಮವಾಗಿ ಅದರ ಬಲ  ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.

ರೆಡ್‌ ಏರ್‌ ವಿಮಾನವು ಡೊಮಿನಿಕ್‌ ಗಣರಾಜ್ಯದ ಬಜೆಟ್‌ ಏರ್‌ಲೈನ್‌ ಸಂಸ್ಥೆಯಾಗಿದ್ದು ಕಳೆದ ವರ್ಷದ ನವೆಂಬರ್‌ ತಿಂಗಳಿನಲ್ಲಷ್ಟೇ ಸೇವೆ ಆರಂಭಿಸಿತ್ತು. ಈ ನಿರ್ದಿಷ್ಟ ವಿಮಾನವು ಸಾಂಟೊ ಡೊಮಿಂಗೋದಿಂದ ಹೊರಟಿತ್ತು ಹಾಗೂ ತಾಂತ್ರಿಕ ಸಮಸ್ಯೆ ಎದುರಿಸಿದೆ ಎಂದು ಸಂಸ್ಥೆ ಹೇಳಿದೆ.

ವಿಮಾನದ ಕಾಕ್‌ಪಿಟ್‌ ವಾಯ್ಸ್‌ ರೆಕಾರ್ಡರ್‌ ಮತ್ತು ಫ್ಲೈಟ್‌ ಡೇಟಾ ರೆಕಾರ್ಡರ್‌ ತನಿಖಾಧಿಕಾರಿಗಳಿಗೆ ದೊರಕಿವೆ. ಘಟನೆ ನಡೆದಾಗ ವಿಮಾನದಲ್ಲಿ 130 ಪ್ರಯಾಣಿಕರು ಹಾಗೂ 10 ಮಂದಿ ಸಿಬ್ಬಂದಿಗಳಿದ್ದರು.

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News