ʼಸಾಮ್ರಾಟ್‌ ಪೃಥ್ವಿರಾಜ್‌ʼ ಸೋಲಿಗೆ ಅಕ್ಷಯ್‌ ಕುಮಾರ್‌ ಬೇಜವಾಬ್ದಾರಿ ಕಾರಣ: ನಿರ್ಮಾಪಕರ ಅಸಮಾಧಾನ

Update: 2022-06-23 15:25 GMT

ಮುಂಬೈ: ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಅವರ ಬಹುನಿರೀಕ್ಷಿತ ಚಿತ್ರ ʼಸಾಮ್ರಾಟ್‌ ಪೃಥ್ವಿರಾಜ್ʼ ಬಾಕ್ಸ್‌ ಆಫೀಸಿನಲ್ಲಿ ಮಕಾಡೆ ಮಲಗಿದೆ. ಜೂನ್ 3 ರಂದು ಬಿಡುಗಡೆಯಾದ ಅಕ್ಷಯ್ ಕುಮಾರ್ ಮತ್ತು ಮಾನುಷಿ ಚಿಲ್ಲರ್ ಮುಖ್ಯಭೂಮಿಕೆಯಲ್ಲಿರುವ ಚಿತ್ರವು ಹಲವು ಥಿಯೇಟರುಗಳಲ್ಲಿ ಈಗಾಗಲೇ ತಮ್ಮ ಪ್ರದರ್ಶನವನ್ನು ನಿಲ್ಲಿಸಿದ್ದು, ಉಳಿದ ಚಿತ್ರಮಂದಿರಗಳಲ್ಲಿ ಇನ್ನೇನು ಸ್ಥಗಿತಗೊಳ್ಳಲಿದೆ ಎಂದು ಬಿಟೌನ್‌ ವ್ಯಾಪಾರೀ ಮೂಲಗಳು ಹೇಳಿವೆ.

ʼಬಚ್ಚನ್‌ ಪಾಂಡೆʼ ಸೋಲಿನಿಂದ ಇನ್ನೂ ಚೇತರಿಸಿಕೊಳ್ಳದ ಅಕ್ಷಯ್‌ಗೆ ಈ ಹೈ-ಬಜೆಟ್‌ ಚಿತ್ರದ ಸೋಲು ಮತ್ತಷ್ಟು ನಿರಾಶೆಯನ್ನು ಮೂಡಿಸಿದೆ. 100 ಕೋಟಿ ರೂ. ಗಿಂತಲೂ ಅಧಿಕ ಬಜೆಟ್‌ನ ಈ ಚಿತ್ರವು ತೋಪೆದ್ದು ಹೋಗಲು ಅಕ್ಷಯ್‌ ಅವರೇ ನೇರ ಕಾರಣ ಎಂಬ ಚರ್ಚೆಗಳು ಆರಂಭವಾಗಿವೆ.

ತಮಿಳಿನ ʼಜಿಗರ್‌ಥಂಡಾʼ ಚಿತ್ರದ ರಿಮೇಕ್‌ ಚಿತ್ರವಾದ ʼಬಚ್ಚನ್‌ ಪಾಂಡೆʼ ಯಲ್ಲಿ ಅಕ್ಷಯ್‌ ಲೋಕಲ್‌ ಗೂಂಡಾನ ಪಾತ್ರದಲ್ಲಿ ನಟಿಸಿದ್ದರೆ, ʼಸಾಮ್ರಾಟ್‌ ಪೃಥ್ವಿರಾಜ್‌ʼ ಚಿತ್ರದಲ್ಲಿ ಐತಿಹಾಸಿಕ ಪಾತ್ರವಾದ ಪೃಥ್ವಿರಾಜ್‌ ಚೌಹಾನ್‌ ಆಗಿ ಅಭಿನಯಿಸಿದ್ದಾರೆ. ಆದರೆ, ವೀಕ್ಷಕರು ಅಕ್ಷಯ್‌ ಅವರ ಈ ಎರಡೂ ಅವತಾರಗಳನ್ನು ನಿರಾಕರಿಸಿ, ಅಕ್ಷಯ್‌ಗೆ ದೊಡ್ಡ ಹೊಡೆತವನ್ನು ನೀಡಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್‌ ಅವರು ಸಾಮ್ರಾಟ್‌ ಪೃಥ್ವಿರಾಜ್‌ ಚಿತ್ರದ ವಿಶೇಷ ಪ್ರದರ್ಶನವನ್ನು ವೀಕ್ಷಿಸಿ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದರೂ, ಉತ್ತರಪ್ರದೇಶ, ಮಧ್ಯಪ್ರದೇಶದಲ್ಲಿ ತೆರಿಗೆ ವಿನಾಯಿತಿ ನೀಡಿದರೂ ಚಿತ್ರ ಮಂದಿರಕ್ಕೆ ಜನರು ಬಾರದಿರುವುದು ಚಿತ್ರದ ತಯಾರಕರಿಗೂ ಗೊಂದಲಕ್ಕೆ ಕಾರಣವಾಗಿದೆ. ಜನರಿಗೆ ಸಿನೆಮಾ ಯಾಕೆ ಇಷ್ಟವಾಗಿಲ್ಲವೆನ್ನುವುದು ಅರ್ಥವಾಗಿಲ್ಲ ಎಂದು ಸ್ವತಃ ನಿರ್ದೇಶಕರೇ ಹೇಳಿಕೊಂಡಿದ್ದರು.

ಕೆಜಿಎಫ್-2, ಕಾಶ್ಮೀರ್‌ ಫೈಲ್ಸ್‌ ಅಬ್ಬರದೆದುರು ಬಚ್ಚನ್‌ ಪಾಂಡೆ ಮಂಕಾಗಿದೆ ಎನ್ನಬಹುದಾದರೂ, ಸಾಮ್ರಾಟ್‌ ಪೃಥ್ವಿರಾಜ್‌ ಸೋಲಲು ಇತರೆ ಚಿತ್ರಗಳ ಪೈಪೋಟಿ ಕಾರಣ ಅನ್ನುವಂತಹ ಪರಿಸ್ಥಿತಿಯೇನೂ ಇರಲಿಲ್ಲ. ಹಾಗಾಗಿ, ಚಿತ್ರದ ಸೋಲಿಗೆ ಕಾರಣವಾಗಿರಬಹುದಾದ ಅಂಶಗಳ ಬಗ್ಗೆ ಚರ್ಚೆಗಳು ನಡೆಯುತ್ತಿದೆ.  ಸಾಮ್ರಾಟ್‌ ಪೃಥ್ವಿರಾಜ್‌ ಚಿತ್ರದ ಟ್ರೇಲರ್‌ ಬಂದಾಗಲೇ ಆ ಪಾತ್ರಕ್ಕೆ ಅಕ್ಷಯ್‌ ಸೂಕ್ತ ವ್ಯಕ್ತಿಯಲ್ಲ ಎಂಬ ಟೀಕೆ ವ್ಯಕ್ತವಾಗಿತ್ತು. ಚಿತ್ರದ ಸೋಲಿಗೆ ಇದೂ ಒಂದು ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಆದರೆ, ಚಿತ್ರತಂಡದ ಮೂಲಗಳ ಪ್ರಕಾರ, ಈ ಚಿತ್ರದ ಸೋಲಿಗೆ ಅಕ್ಷಯ್‌ ಕುಮಾರ್‌ ಅವರೇ ಕಾರಣ ಎನ್ನಲಾಗುತ್ತಿದೆ. ಸ್ವತಃ ಚಿತ್ರದ ನಿರ್ಮಾಪಕ ಆದಿತ್ಯ ಚೋಪ್ರಾ ಅವರೇ ಈ ಸೋಲಿನ ಹಿನ್ನೆಲೆಯಲ್ಲಿ ಅಕ್ಷಯ್‌ ಕುಮಾರ್‌ ವಿರುದ್ಧ ಕೆಂಡಾಮಂಡಲರಾಗಿದ್ದಾರೆ ಎಂದು ಚಿತ್ರತಂಡದ ಮೂಲಗಳು ಹೇಳಿರುವುದಾಗಿ indiatoday.in ಸೇರಿದಂತೆ ಹಲವು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ʼಆ ಚಿತ್ರವು ಸಂಪೂರ್ಣ ಬದ್ಧತೆಯನ್ನು ಕೇಳುತ್ತದೆ. ಆದರೆ, ಆತ (ಅಕ್ಷಯ್‌ ಕುಮಾರ್)‌ ನಿಜವಾದ ಮೀಸೆಯನ್ನು ಬೆಳೆಸಲೂ ತಯಾರಿಲ್ಲ. ಅಲ್ಲದೇ ಅದೇ ಸಮಯದಲ್ಲಿ ಅವರು ಇತರೆ ಪ್ರಾಜೆಕ್ಟುಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಐತಿಹಾಸಿಕವಾಗಿ ಪ್ರಾಮುಖ್ಯತೆ ಹೊಂದಿರುವ ಕಥಾಪಾತ್ರವನ್ನು ನಿರ್ವಹಿಸುವಾಗ ಒಂದು ಪ್ರಾಜೆಕ್ಟ್‌ ಮಾತ್ರ ಮಾಡುವಷ್ಟು ಬದ್ಧತೆಯನ್ನೂ ನೀಡಲಾಗುವುದಿಲ್ಲವೇ?ʼ ಎಂದು ನಿರ್ಮಾಪಕ ಆದಿತ್ಯ ಚೋಪ್ರಾ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ.

ಈ ನಡುವೆ ಚಿತ್ರದ ಹೀನಾಯ ಸೋಲಿನ ಬಗ್ಗೆ ಪ್ರತಿಕ್ರಿಯಿಸಿರುವ ಚಿತ್ರದ ಕತೆಗಾದ ಮತ್ತು ನಿರ್ದೇಶಕ ಡಾ. ಚಂದ್ರಪ್ರಕಾಶ್ ದ್ವಿವೇದಿ, ಈ ಕತೆಯನ್ನು ಸನ್ನಿ ಡಿಯೋಲ್‌ಗಾಗಿ ಬರೆದಿರುವುದಾಗಿ ಹೇಳಿದ್ದಾರೆ. ನಿರ್ದೇಶಕರ ಮೊದಲ ಆಯ್ಕೆ ಸನ್ನಿ ಡಿಯೋಲ್‌ ಆಗಿದ್ದು, ಅಕ್ಷಯ್‌ ಕುಮಾರ್‌ ಆಗಿರಲಿಲ್ಲ ಎಂದು ಅವರು ಹೇಳಿರುವುದಾಗಿ news18.com ವರದಿ ಮಾಡಿದೆ. ಅದಾಗ್ಯೂ, ಚಿತ್ರದ ಸೋಲಿಗೆ ಸ್ಪಷ್ಟ ಕಾರಣವೇನೆಂದು ತನಗೆ ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News