ಮಾದಕ ದ್ರವ್ಯ ಪ್ರಕರಣ: ರಿಯಾ ಚಕ್ರವರ್ತಿ, ಇತರರ ವಿರುದ್ಧ ಕರಡು ಆರೋಪಗಳನ್ನು ಸಲ್ಲಿಸಿದ ಎನ್ಸಿಬಿ

Update: 2022-06-23 16:00 GMT
PHOTO: wikipedia

ಮುಂಬೈ,ಜೂ.23: ಮಾದಕ ದ್ರವ್ಯ ನಿಯಂತ್ರಣ ಘಟಕ (ಎನ್ಸಿಬಿ)ವು 2020ರಲ್ಲಿ ಬಾಲಿವುಡ್ ನಟ ಸುಷಾಂತ ಸಿಂಗ್ ರಾಜಪೂತ್ ಅವರ ಸಾವಿನ ಬಳಿಕ ದಾಖಲಿಸಿಕೊಂಡಿದ್ದ ಮಾದಕ ದ್ರವ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ನಟಿ ರಿಯಾ ಚಕ್ರವರ್ತಿ,ಅವರ ಸೋದರ ಶೋವಿಕ್ ಚಕ್ರವರ್ತಿ ಮತ್ತು ಇತರರ ವಿರುದ್ಧ ಕರಡು ಆರೋಪಗಳನ್ನು ಇಲ್ಲಿಯ ನ್ಯಾಯಾಲಯದಲ್ಲಿ ಸಲ್ಲಿಸಿದೆ.

ಯಾವುದೇ ಪ್ರಕರಣದಲ್ಲಿ ಕರಡು ಆರೋಪಗಳು ಸಲ್ಲಿಕೆಯಾದ ಬಳಿಕ ನ್ಯಾಯಾಲಯವು ಅವುಗಳ ಕುರಿತು ವಿಚಾರಣೆ ನಡೆಸುತ್ತದೆ ಮತ್ತು ಆರೋಪಿಯ ವಿರುದ್ಧದ ದೋಷಾರೋಪಣ ಪಟ್ಟಿಯಲ್ಲಿ ಉಲ್ಲೇಖಿಸಲಾದ ಪ್ರಾಥಮಿಕ ಸಾಕ್ಷಗಳ ಆಧಾರದಲ್ಲಿ ಯಾವುದೇ ಆರೋಪವನ್ನು ರೂಪಿಸಬೇಕೇ ಅಥವಾ ಕೈಬಿಡಬೇಕೇ ಎನ್ನುವುದನ್ನು ನಿರ್ಧರಿಸುತ್ತದೆ.
ನ್ಯಾಯಾಲಯವು ಆರೋಪಗಳನ್ನು ರೂಪಿಸಿದ ಬಳಿಕ ಆರೋಪಿಗಳು ತಪ್ಪು ಒಪ್ಪಿಕೊಂಡರೆ ಶಿಕ್ಷೆಯನ್ನು ಪ್ರಕಟಿಸಲಾಗುತ್ತದೆ ಮತ್ತು ತಪ್ಪು ಒಪ್ಪಿಕೊಳ್ಳದಿದ್ದರೆ ವಿಚಾರಣೆಯನ್ನು ಆರಂಭಿಸಲಾಗುತ್ತದೆ.
ಕಳೆದ ವರ್ಷದ ಮಾರ್ಚ್ನಲ್ಲಿ ಸಲ್ಲಿಸಲಾಗಿದ್ದ ದೋಷಾರೋಪಣ ಪಟ್ಟಿಯಲ್ಲಿನ ಆರೋಪಿಗಳ ವಿರುದ್ಧದ ಎಲ್ಲ ಆರೋಪಗಳನ್ನು ಪ್ರಾಸಿಕ್ಯೂಷನ್ ಉಲ್ಲೇಖಿಸಿದೆ ಎಂದು ವಿಶೇಷ ಸರಕಾರಿ ವಕೀಲ ಅತುಲ್ ಸರಪಾಂಡೆ ತಿಳಿಸಿದರು.
ಆರೋಪಿಗಳ ವಿರುದ್ಧ ಆರೋಪಗಳನ್ನು ರೂಪಿಸಲು ನ್ಯಾಯಾಲಯವು ನಿಗದಿಗೊಳಿಸಿತ್ತು,ಆದರೆ ಅವರ ಪೈಕಿ ಕೆಲವರು ತಮ್ಮನ್ನು ಆರೋಪಗಳಿಂದ ಮುಕ್ತಗೊಳಿಸುವಂತೆ ಅರ್ಜಿಗಳನ್ನು ಸಲ್ಲಿಸಿರುವುದರಿಂದ ಅದು ಸಾಧ್ಯವಾಗಲಿಲ್ಲ ಎಂದು ತಿಳಿಸಿದ ಅವರು,ಆರೋಪ ಮುಕ್ತಿ ಅರ್ಜಿಗಳನ್ನು ಇತ್ಯರ್ಥಗೊಳಿಸಿದ ಬಳಿಕವಷ್ಟೇ ಆರೋಪಗಳನ್ನು ರೂಪಿಸಲು ನ್ಯಾಯಾಲಯವು ನಿರ್ಧರಿಸಿದೆ ಎಂದರು.
ಮುಂದಿನ ವಿಚಾರಣೆಯು ಜು.12ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News