ಅಫ್ಘಾನ್:‌ ಭೂಕಂಪ ರಕ್ಷಣಾ ಕಾರ್ಯಾಚರಣೆಗೆ ಮಳೆಯ ಅಡ್ಡಿ

Update: 2022-06-23 17:12 GMT
photo: Twitter

ಕಾಬೂಲ್, ಜೂ.24: ಬುಧವಾರ ಬೆಳಿಗ್ಗೆ ಸಂಭವಿಸಿದ ಭೀಕರ ಭೂಕಂಪದಿಂದ ನಡುಗಿಹೋಗಿರುವ ಅಫ್ಘಾನಿಸ್ತಾನದಲ್ಲಿ ನಿರಂತರ ಮಳೆಯಿಂದ ಪ್ರವಾಹದ ಸಮಸ್ಯೆ ತಲೆದೋರಿದ್ದು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ಮೂಲಗಳು ಹೇಳಿವೆ.

 ದುರ್ಗಮ ಪ್ರದೇಶದಲ್ಲಿರುವ ಹಲವು ಗ್ರಾಮಗಳನ್ನು ತಲುಪಲು ಸಮಸ್ಯೆಯಾಗುತ್ತಿದೆ. ಬುಧವಾರ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ತಗ್ಗುಪ್ರದೇಶಗಳು ಜಲಾವೃತಗೊಂಡಿವೆ. ಭೂಕಂಪದಿಂದ ಮೊಬೈಲ್ ಟವರ್, ವಿದ್ಯುತ್ ಕಂಬಗಳು ಧರೆಗುರುಳಿರುವುದರಿಂದ ಸಂಪರ್ಕ ಮತ್ತು ಸಂವಹನ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಭೂಕಂಪದಿಂದ ಉರುಳಿ ಬಿದ್ದ ಮನೆಗಳ ಅವಶೇಷಗಳು ನೆರೆನೀರಿನಲ್ಲಿ ತೇಲಿಬಂದು ಹಲವೆಡೆ ರಸ್ತೆ, ರೈಲು ಹಳಿಗಳ ಮೇಲೆ ರಾಶಿಬಿದ್ದಿದ್ದು ಇವನ್ನು ತೆರವುಗೊಳಿಸಲು ನಿರಂತರ ಸುರಿಯುತ್ತಿರುವ ಮಳೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಂಪರ್ಕ ವ್ಯವಸ್ಥೆ ಕಡಿದು ಹೋಗಿರುವುದರಿಂದ ದೂರದ ಗ್ರಾಮಗಳಿಂದ ಮಾಹಿತಿ ಪಡೆಯಲು ತೊಡಕಾಗುತ್ತಿದೆ. ಭೂಕಂಪದಿಂದ ಮೃತಪಟ್ಟವರ ಅಥವಾ ಗಾಯಗೊಂಡವರ ಬಗ್ಗೆ, ನಾಶ ನಷ್ಟದ ಬಗ್ಗೆ ನಿಖರ ಮಾಹಿತಿ ಪಡೆಯಲು ಸಮಸ್ಯೆಯಾಗುತ್ತಿದೆ ಎಂದು ಪಾಕ್ತಿಕಾ ಪ್ರಾಂತದ ಮಾಹಿತಿ ಕಚೇರಿಯ ಮುಖ್ಯಸ್ಥ ಮುಹಮ್ಮದ್ ಅಮೀನ್ ಹುಝೈಫಾ ಹೇಳಿದ್ದಾರೆ.
 
ಭೂಕಂಪದಿಂದ ನಲುಗಿರುವ ಅಫ್ಘಾನ್ಗೆ ನೆರವಾಗಲು ವಿಶ್ವಸಂಸ್ಥೆ ಪೂರ್ಣ ಸನ್ನದ್ಧವಾಗಿದೆ. ಔಷಧ, ಆಹಾರ, ತುರ್ತು ಚಿಕಿತ್ಸಾ ಕಿಟ್ಗಳು, ತುರ್ತು ಆಶ್ರಯ ವ್ಯವಸ್ಥೆಯ ಸಹಿತ ಆರೋಗ್ಯ ಸಿಬಂದಿಗಳ ತಂಡವನ್ನು ಅಫ್ಘಾನ್ಗೆ ನಿಯೋಜಿಸಲಾಗಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಹೇಳಿದ್ದಾರೆ. ನೆರವಿನ ಸಾಮಾಗ್ರಿ ಹೊತ್ತ ವಿಮಾನಗಳು ಖತರ್ ಮತ್ತು ಇರಾನ್ನಿಂದ ಆಗಮಿಸಿವೆ. ಔಷಧ, ಟೆಂಟ್ ಮತ್ತು ಆಹಾರ ವಸ್ತುಗಳನ್ನು ಪಾಕಿಸ್ತಾನ ಲಾರಿಗಳ ಮೂಲಕ ರವಾನಿಸಿದೆ. ಆದರೆ ನಿರಂತರ ಮಳೆ ಮತ್ತು ನೆರೆಯು ಭೂಕಂಪ ಪೀಡಿತ ಪ್ರದೇಶಗಳಿಗೆ ನೆರವನ್ನು ರವಾನಿಸಲು ತಡೆಯೊಡ್ಡಿದೆ ಎಂದು ಅಫ್ಘಾನ್ ಸರಕಾರದ ವಕ್ತಾರ ಝಬೀಹುಲ್ಲಾ ಮುಜಾಹಿದ್ ಹೇಳಿದ್ದಾರೆ.

ಭೂಕಂಪದಿಂದ ಸುಮಾರು 2000 ಮನೆಗಳು ನಾಶಗೊಂಡಿರುವ ಸಾಧ್ಯತೆಯಿದೆ ಎಂದು ಅಫ್ಘಾನ್ನಲ್ಲಿ ವಿಶ್ವಸಂಸ್ಥೆಯ ಮಾನವೀಯ ಉಪಕ್ರಮಗಳ ಸಂಯೋಜಕ ರಮೀರ್ ಅಲ್ಕಬರೋವ್ ಹೇಳಿದ್ದಾರೆ. ನಮ್ಮದು ಬಡದೇಶವಾಗಿದ್ದು ಸಂಪನ್ಮೂಲದ ಕೊರತೆಯಿದೆ. ಇದು ಮಾನವೀಯ ಬಿಕ್ಕಟ್ಟು, ಇದು ಸುನಾಮಿಯಂತಿದೆ ಎಂದು ಕಾಬೂಲ್ನ ಆಸ್ಪತ್ರೆಯ ನಿರ್ದೇಶಕ ಮುಹಮ್ಮದ್ ಯಾಹ್ಯಾ ವಿಯಾರ್ ಹೇಳಿದ್ದಾರೆ. ಅಫ್ಘಾನ್ನಲ್ಲಿ ಸಂಭವಿಸಿದ ಭೂಕಂಪದಿಂದ ತೀವ್ರ ಆಘಾತ ಮತ್ತು ದುಃಖವಾಗಿದೆ ಎಂದು ಅಮೆರಿಕ ಪ್ರತಿಕ್ರಿಯಿಸಿದೆ. ಅಧ್ಯಕ್ಷ ಬೈಡನ್ ಅಲ್ಲಿನ ಬೆಳವಣಿಗೆಗಳನ್ನು ಗಮನಿಸುತ್ತಿದ್ದು ಭೂಕಂಪದಿಂದ ತೊಂದರೆಗೊಳಗಾದವರಿಗೆ ಅಮೆರಿಕ ಯಾವ ರೀತಿ ನೆರವಾಗಬಹುದು ಎಂಬುದನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾಕ್ ಸುಲಿವಾನ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News