ಸುಡಾನ್: ಜೂನ್ ತಿಂಗಳಲ್ಲೇ 84,000 ಮಂದಿ ಸ್ಥಳಾಂತರ; ವಿಶ್ವಸಂಸ್ಥೆ ವರದಿ

Update: 2022-06-23 18:09 GMT

ವಿಶ್ವಸಂಸ್ಥೆ, ಜೂ.24: ದಕ್ಷಿಣ ಸುಡಾನ್ ನಲ್ಲಿನ ವ್ಯಾಪಕ ಹಿಂಸಾಚಾರದಿಂದಾಗಿ ಈ ತಿಂಗಳಲ್ಲೇ 84,000ಕ್ಕೂ ಅಧಿಕ ಮಂದಿ ನೆಲೆ ಕಳೆದುಕೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ. 2021ರ ಜನವರಿಯ ಬಳಿಕದ ಅತ್ಯಧಿಕ ಪ್ರಮಾಣ ಇದಾಗಿದೆ. ಕಳೆದ ವರ್ಷ ಹಿಂಸಾಚಾರಕ್ಕೆ ತತ್ತರಿಸಿ ಮನೆಬಿಟ್ಟು ಓಡಿಹೋದವರ ಸಂಖ್ಯೆ 4,40,500ಕ್ಕೂ ಅಧಿಕವಾಗಿದ್ದು 2020ಕ್ಕೆ ಹೋಲಿಸಿದರೆ ಇದು 5 ಪಟ್ಟು ಅಧಿಕ ಎಂದು ವಿಶ್ವಸಂಸ್ಥೆಯ ಅಂಕಿಅಂಶ ತಿಳಿಸಿದೆ.

ಪಶ್ಚಿಮ ಸುಡಾನ್ನ ದರ್ಫುರ್ ವಲಯದಲ್ಲಿ 2003ರಲ್ಲಿ ಹಿಂಸಾಚಾರ ಭುಗಿಲೆದ್ದಿರುವುದು ನೆಲೆ ಕಳೆದುಕೊಂಡವರ ಪ್ರಮಾಣದ ಹೆಚ್ಚಳಕ್ಕೆ ಮೂಲ ಕಾರಣವಾಗಿದೆ ಎಂದು ನೆರವು ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ. ಸುಡಾನ್ ಸರಕಾರ ತಮಗೆ ಅನ್ಯಾಯ ಮಾಡಿದೆ ಎಂದು ಆಕ್ರೋಶಗೊಂಡಿದ್ದ, ಬಹುತೇಕ ಆಫ್ರಿಕನ್ ಕೃಷಿಕರನ್ನು ಒಳಗೊಂಡ ಬಂಡುಗೋರ ಪಡೆಯನ್ನು ಹಿಮ್ಮೆಟ್ಟಿಸಲು ಸುಡಾನ್ ಸರಕಾರ ಜಂಜಾವೀದ್ ಎಂದು ಕರೆಯಲಾಗುವ ಅರಬ್ ಬುಡಕಟ್ಟು ಹೋರಾಟಗಾರರ ನೆರವು ಪಡೆದಿತ್ತು. ಆ ಬಳಿಕ ದರ್ಫುರ್ ವಲಯದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಹಿಂಸಾಚಾರದಲ್ಲಿ ಕನಿಷ್ಟ 3 ಲಕ್ಷ ಮಂದಿ ಪ್ರಾಣ ಕಳೆದುಕೊಂಡಿದ್ದರೆ ಸುಮಾರು 2.5 ಮಿಲಿಯನ್ ಜನತೆ ನೆಲೆ ಕಳೆದುಕೊಂಡಿದ್ದರು. ಸರಕಾರ ಜಂಜಾವೀದ್ ಪಡೆಗೆ ಶಸ್ತ್ರಾಸ್ತ್ರ ಒದಗಿಸಿ ಅವರನ್ನು ಬುಡಕಟ್ಟು ಬಂಡುಗೋರರ ವಿರುದ್ಧ ಬಳಸುತ್ತಿದೆ ಎಂಬ ಆರೋಪವನ್ನು ಸರಕಾರ ತಳ್ಳಿಹಾಕಿತ್ತು. 2020ರಲ್ಲಿ ನಡೆದ ಶಾಂತಿ ಮಾತುಕತೆಯ ಪ್ರಕಾರ ಶಾಂತಿಪಾಲನಾ ಪಡೆಯನ್ನು ಈ ವಲಯದಲ್ಲಿ ನಿಯೋಜಿಸಬೇಕು. ಆದರೆ ಒಪ್ಪಂದ ಅನುಷ್ಟಾನಕ್ಕೆ ಆರ್ಥಿಕ ಮುಗ್ಗಟ್ಟು ಎದುರಾಗಿದೆ ಎಂದು ವಿತ್ತಸಚಿವ, ಬಂಡುಗೋರ ತಂಡದ ಮುಖಂಡ ಜಿಬ್ರಿಲ್ ಇಬ್ರಾಹಿಂ ಹೇಳಿದ್ದಾರೆ. ಜೂನ್ನಲ್ಲಿ ಪಶ್ಚಿಮ ದರ್ಫುರ್ನ ಕುಲ್ಬೂಸ್ ಪ್ರದೇಶದಲ್ಲಿ ಗಿಮಿರ್ ಬುಡಕಟ್ಟು ಸಮುದಾಯದವರು ವಾಸಿಸುತ್ತಿದ್ದ ಹಳ್ಳಿಗೆ ಜಂಜಾವಿದ್ ಪಡೆ ದಾಳಿ ನಡೆಸಿದಾಗ ಭುಗಿಲೆದ್ದ ಘರ್ಷಣೆಯಲ್ಲಿ 125 ಮಂದಿ ಮೃತರಾಗಿ 50,000 ಮಂದಿ ಮನೆಬಿಟ್ಟು ಓಡಿಹೋಗಿದ್ದರು. ದಕ್ಷಿಣದ ಕೊರ್ಡೊಫಾನ್ ರಾಜ್ಯದಲ್ಲಿ ಹವಝ್ಮ ಮತ್ತು ಕೆನಾನ ಬುಡಕಟ್ಟು ಸಮುದಾಯದ ಮಧ್ಯೆ ಈ ತಿಂಗಳು ನಡೆದ ಘರ್ಷಣೆಯಲ್ಲಿ 4,000 ಮನೆಗಳನ್ನು ಸುಟ್ಟುಹಾಕಲಾಗಿದ್ದು 19 ಮಂದಿ ಮೃತಪಟ್ಟು 15,150 ಮಂದಿ ನೆಲೆ ಕಳೆದುಕೊಂಡಿದ್ದರು. ಘರ್ಷಣೆ ನಡೆದ ಮಾಹಿತಿಯಂತೆ ಆ ಪ್ರದೇಶ ತಲುಪುವಷ್ಟರಲ್ಲಿ ಇನ್ನೆರಡು ಕಡೆ ಘರ್ಷಣೆ ಭುಗಿಲೆದ್ದ ಮಾಹಿತಿ ಲಭಿಸುತ್ತದೆ. ಇದರಿಂದ ಸಮಸ್ಯೆ ಬಿಗಡಾಯಿಸುತ್ತಿದೆ ಎಂದು ನಾರ್ವೆಯ ನಿರಾಶ್ರಿತರ ಸಮಿತಿಯ ಸದಸ್ಯ ವಿಲ್ ಕಾರ್ಟರ್ ಹೇಳಿದ್ದಾರೆ. ಅಂತರಾಷ್ಟ್ರೀಯ ಶಾಂತಿಪಾಲನಾ ಪಡೆ ಸುಡಾನ್ನಿಂದ 2021ರಲ್ಲಿ ನಿರ್ಗಮಿಸಿದ ಬಳಿಕ ಸುಡಾನ್ನ ಮಧ್ಯಂತರ ಸರಕಾರ ಅಥವಾ ಸೇನಾಡಳಿತ ಘರ್ಷಣೆ ನಿವಾರಣೆಗೆ ಕ್ರಮ ಕೈಗೊಂಡಿಲ್ಲ ಎಂದು ಸುಡಾನ್ನ ಮಾನವಹಕ್ಕು ನಿಗಾ ಸಮಿತಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News