ಕೋನಸೀಮಾ ಜಿಲ್ಲೆಗೆ ಅಂಬೇಡ್ಕರ್ ಹೆಸರು ಮರುನಾಮಕರಣ ಮಾಡಲು ಆಂಧ್ರಪ್ರದೇಶ ಸಚಿವ ಸಂಪುಟ ಅನುಮೋದನೆ

Update: 2022-06-24 12:52 GMT

ಕರ್ನೂಲ್:‌ ಕೋನಸೀಮಾ ಜಿಲ್ಲೆಯನ್ನು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ವಿರೋಧಿಸಿ ಹಿಂಸಾಚಾರ ನಡೆದ ಒಂದು ತಿಂಗಳ ನಂತರ ಕೋನಸೀಮಾ ಜಿಲ್ಲೆಯನ್ನು ʼಡಾ ಬಿಆರ್ ಅಂಬೇಡ್ಕರ್ ಕೋನಸೀಮಾ ಜಿಲ್ಲೆʼ ಎಂದು ಮರುನಾಮಕರಣ ಮಾಡುವ ನಿರ್ಧಾರಕ್ಕೆ ಆಂಧ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಶುಕ್ರವಾರ, ಜೂನ್ 24 ರಂದು ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯು ಜಿಲ್ಲೆಯನ್ನು ಮರುನಾಮಕರಣ ಮಾಡಲು ಮೇ 18 ರಂದು ಹೊರಡಿಸಿದ ಗೆಜೆಟ್ ಅಧಿಸೂಚನೆಗೆ ಅನುಮೋದನೆ ನೀಡಿದೆ.

ಸರ್ಕಾರದ ಕ್ರಮದ ವಿರುದ್ಧ ಮೇ 24 ರಂದು ಗುಂಪು ಹಿಂಸಾಚಾರಕ್ಕೆ ಸಾಕ್ಷಿಯಾದ ಜಿಲ್ಲಾ ಕೇಂದ್ರ ಅಮಲಾಪುರಂನಲ್ಲಿ ಜಿಲ್ಲೆಯಾದ್ಯಂತ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ. ಹಿಂಸಾಚಾರದಲ್ಲಿ 25 ಪೊಲೀಸ್ ಸಿಬ್ಬಂದಿ ಸೇರಿದಂತೆ ಹತ್ತಾರು ಜನರು ಗಾಯಗೊಂಡಿದ್ದರು. ಪ್ರತಿಭಟನಾಕಾರರು ರಾಜ್ಯ ಸಚಿವ ಪಿ ವಿಶ್ವರೂಪ್ ಮತ್ತು ಶಾಸಕ ಪಿ ಸತೀಶ್ ಅವರ ಮನೆಗೆ, ಕೆಲವು ಪೊಲೀಸ್ ಮತ್ತು ಖಾಸಗಿ ವಾಹನಗಳಿಗೆ ಬೆಂಕಿ ಹಚ್ಚಿದ್ದರು.

ಕ್ಯಾಬಿನೆಟ್ ಇದೀಗ ಈ ನಿರ್ಧಾರ ಕೈಗೊಂಡ ದೃಷ್ಟಿಯಿಂದ, ಯಾವುದೇ ಪ್ರತಿಭಟನೆಗಳನ್ನು ತಡೆಯಲು ಪೊಲೀಸರು ಭದ್ರತಾ ವ್ಯವಸ್ಥೆಗಳನ್ನು ಕೈಗೊಂಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರಣ ಹಾಗೂ ಜಿಲ್ಲೆಯ ಇತರೆಡೆ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿತ್ತು. ಕಳೆದ ತಿಂಗಳು ಹಿಂಸಾಚಾರಕ್ಕೆ ಕಾರಣವಾದ ಬೃಹತ್ ಪ್ರತಿಭಟನೆಗಳನ್ನು ಆಯೋಜಿಸಿದ್ದ ಸಂಘಟನೆಗಳ ಮೇಲೆ ಬಿಗಿ ನಿಗಾ ಇರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News