ಪಕ್ಷಾಂತರಿ ಶಾಸಕರಿಗೆ 5 ವರ್ಷ ಚುನಾವಣೆ ನಿಷೇಧ ಕೋರುವ ಅರ್ಜಿಯ ವಿಚಾರಣೆಗೆ ಸುಪ್ರೀಂಕೋರ್ಟ್ ಸಮ್ಮತಿ

Update: 2022-06-24 14:50 GMT

 ಹೊಸದಿಲ್ಲಿ,ಜೂ.24: ಪಕ್ಷಾಂತರ ಮಾಡಿದ ಶಾಸಕರಿಗೆ ಐದು ವರ್ಷಗಳವರೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದಿನ ವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಉಲ್ಬಣಾವಸ್ಥೆಗೆ ತಲುಪಿರುವ ನಡುವೆಯೇ ಸುಪ್ರೀಂಕೋರ್ಟ್ ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವುದು ಹೆಚ್ಚಿನ ಮಹತ್ವವನ್ನು ಪಡೆದಿದೆ.

  ಕಳೆದ ವರ್ಷ ತಾನು ಸಲ್ಲಿಸಿದ್ದ ಈ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕೆಂದು ಕೋರಿ ಮಧ್ಯಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಾ ಠಾಕೂರ್ ಸುಪ್ರೀಂಕೋರ್ಟ್ಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಕೇಂದ್ರ ಸರಕಾರದಿಂದ ಪ್ರತಿಕ್ರಿಯೆಯನ್ನು ಕೇಳಿದೆ.

ಪಕ್ಷವನ್ನು ಬದಲಾಯಿಸುವ ಶಾಸಕರನ್ನು, ಅವರು ರಾಜೀನಾಮೆ ನೀಡಿದ ಅಥವಾ ಅನರ್ಹಗೊಂಡ ದಿನಾಂಕದಿಂದ ಐದು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸುವುದನ್ನು ನಿಷೇಧಿಸಬೇಕೆಂದು ಜಯಾ ಠಾಕೂರ್ ಸುಪ್ರೀಂಕೋರ್ಟ್ಗೆ ಅರ್ಜಿಯಲ್ಲಿ ಆಗ್ರಹಿಸಿದ್ದರು.

ಪಕ್ಷಾಂತರವು ಅಸಂವಿಧಾನಿಕವಾಗಿದ್ದು ಅರ್ಜಿಯಲ್ಲಿ ಅಭಿಪ್ರಾಯಿಸಿರುವ ಅರ್ಜಿದಾರರು, ಕೆಲವು ರಾಜಕೀಯ ಪಕ್ಷಗಳ ದೇಶದ ಪ್ರಜಾತಾಂತ್ರಿಕ ಸಂರಚನೆಯನ್ನು ನಾಶಪಡಿಸಲು ಯತ್ನಿಸುತ್ತಿವೆ ಎಂದು ಹೇಳಿದ್ದರು. ವಿಧಾನಸಭಾ ಸ್ಪೀಕರ್ಗಳು ತಟಸ್ಥ ಧೋರಣೆಯನ್ನು ಉಳಿಸಿಕೊಳ್ಳದೆ ಇರುವ ಪ್ರವೃತ್ತಿ ಹೆಚ್ಚುತ್ತಿರುವ ಬಗ್ಗೆ ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದಾರೆ.

 ರಾಜಕೀಯ ಪಕ್ಷಗಳು ಶಾಸಕರ ಕುದುರೆ ವ್ಯಾಪಾರ ಹಾಗೂ ಭ್ರಷ್ಟಾಚಾರದಲ್ಲಿ ನಿರತವಾಗಿವೆ. ಪೌರರಿಗೆ ಸುಸ್ಥಿರ ಸರಕಾರವನ್ನು ನಿರಾಕರಿಸಲಾಗುತ್ತಿದೆ. ಈ ಅಪ್ರಜಾತಾಂತ್ರಿಕ ಆಚರಣೆಗಳು ನಮ್ಮ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಅಣಕಿಸುತ್ತಿವೆ. ಇಂತಹ ಅಪ್ರಜಾತಾಂತ್ರಿಕ ಆಚರಣೆಗಳನ್ನು ಹತ್ತಿಕ್ಕ ಬೇಕಾದ ಅಗತ್ಯವಿದೆ’’ ಎಂದು ಅರ್ಜಿಯಲ್ಲಿ ಆಗ್ರಹಿಸಲಾಗಿದೆ.

    ನಿರಂತರವಾದ ಪಕ್ಷಾಂತರಗಳಿಂದಾಗಿ ಉಪಚುನಾವಣೆಗಳು ನಡೆಯುವಂತಹ ಪರಿಸ್ಥಿತಿಯಿದ್ದು ಇದರಿಂದ ದೇಶದ ಬೊಕ್ಕಸಕ್ಕೆ ಹಾನಿಯುಂಟು ಮಾಡಿದೆ. ಸಮಾನವಾದ ಸಿದ್ಧಾಂತವನ್ನು ಹೊಂದಿರುವ ಚುನಾಯಿತ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕನ್ನು ಮತದಾರರಿಗೆ ನಿರಾಕರಿಸಲಾಗುತ್ತಿದೆ ಎಂದು ಠಾಕೂರ್ ಅವರು 2020ರಲ್ಲಿ ಪಕ್ಷಾಂತರಗೊಂಡ ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಸರಕಾರದಲ್ಲಿ ಸಚಿವರನ್ನಾಗಿ ಮಾಡಿದ ಘಟನೆಯನ್ನು ಅರ್ಜಿಯಲ್ಲಿ ಪ್ರಸ್ತಾವಿಸಿದ್ದಾರೆ.

ಠಾಕೂರ್ ಅವರ ಅರ್ಜಿಯ ಆಲಿಕೆಯನ್ನು ಜೂನ್ 29, ಬುಧವಾರ ನಡೆಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News