ಅಂಗಡಿಯಲ್ಲಿ ಬಟ್ಟೆ, ಚಪ್ಪಲಿ ವ್ಯಾಪಾರ ಮಾಡುತ್ತಿರುವ ಅಂತಾರಾಷ್ಟ್ರೀಯ ಕ್ರಿಕೆಟ್‌ ಅಂಪೈರ್‌ ಅಸದ್‌ ರವೂಫ್‌

Update: 2022-06-24 15:21 GMT
Photo: Twitter/ourunstablemind

ಲಾಹೋರ್: ಬರೋಬ್ಬರಿ ನೂರ ಎಪ್ಪತ್ತು ಅಂತರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳಲ್ಲಿ ಅಂಪೈರ್‌ ಮಾಡಿದ್ದ ಅಸದ್ ರವೂಫ್‌ ಸದ್ಯ ಲಾಹೋರ್‌ನ ಬಾಂಡಾ ಬಝಾರ್‌ನಲ್ಲಿ ಬಟ್ಟೆ ಹಾಗೂ ಶೂ ಮಾರಾಟ ಮಾಡುವ ಅಂಗಡಿಯಿಟ್ಟುಕೊಂಡು ಬದುಕು ಸಾಗಿಸುತ್ತಿದ್ದಾರೆ.  2000 ದಿಂದ 2013 ರವರೆಗೆ 49 ಟೆಸ್ಟ್, 98 ಏಕದಿನ ಮತ್ತು 23 T20 ಗಳನ್ನು ಒಳಗೊಂಡಂತೆ ರವೂಫ್‌ ಅವರು 170 ಅಂತರಾಷ್ಟ್ರೀಯ ಪಂದ್ಯಗಳ ಅಂಪೈರ್‌ ಆಗಿ ಕಾರ್ಯನಿರ್ವಹಿಸಿದ್ದಾರೆ.

ಒಂದು ಕಾಲದಲ್ಲಿ ಐಸಿಸಿ ಅಂಪೈರ್‌ಗಳ ಎಲೈಟ್ ಪ್ಯಾನೆಲ್‌ನ ಭಾಗವಾಗಿದ್ದ ಅವರು, ಇನ್ನು ಮುಂದೆ ನನಗೆ ಕ್ರೀಡೆಯಲ್ಲಿ ಯಾವುದೇ ಆಸಕ್ತಿ ಉಳಿದಿಲ್ಲವೆನ್ನುತ್ತಿದ್ದಾರೆ.

ʼನನ್ನ ಜೀವನದುದ್ದಕ್ಕೂ ನಾನು ಹಲವಾರು ಪಂದ್ಯಗಳಲ್ಲಿ ಅಂಪೈರ್ ಮಾಡಿದ್ದೇನೆ, ಈಗ ನೋಡಲು ಯಾರೂ ಉಳಿದಿಲ್ಲ. 2013 ರಿಂದ ನಾನು ಆಟದೊಂದಿಗೆ ಸಂಪರ್ಕದಲ್ಲಿಲ್ಲ, ಏಕೆಂದರೆ ನಾನು ಏನನ್ನಾದರೂ ಬಿಟ್ಟರೆ ನಾನು ಅದನ್ನು ಸಂಪೂರ್ಣವಾಗಿ ಬಿಟ್ಟೇ ಬಿಡುತ್ತೇನೆʼ ಎಂದು ಪಾಕಿಸ್ತಾನಿ ಸುದ್ದಿ ವಾಹಿನಿ Paktv.tv ಯೊಂದಿಗಿನ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

ಐಪಿಎಲ್ 2013 ರ ಮ್ಯಾಚ್ ಫಿಕ್ಸಿಂಗ್ ವಿವಾದದ ವೇಳೆ ಬುಕ್ಕಿಗಳಿಂದ ದುಬಾರಿ ಉಡುಗೊರೆಗಳನ್ನು ಸ್ವೀಕರಿಸಿದ ಆರೋಪ ಕೇಳಿ ಬಂದ ನಂತರ ರವೂಫ್‌ ಅವರನ್ನು ಶಿಸ್ತು ಸಮಿತಿಯು 2016 ರಲ್ಲಿ ಐದು ವರ್ಷಗಳ ಕಾಲ ಬಿಸಿಸಿಐನಿಂದ ನಿಷೇಧಿಸಿತ್ತು.

" ನಂತರ ಬಂದ ಈ ಸಮಸ್ಯೆಗಳನ್ನು ಹೊರತುಪಡಿಸಿ ನಾನು ಐಪಿಎಲ್‌ನಲ್ಲಿ ನನ್ನ ಅತ್ಯುತ್ತಮ ಸಮಯವನ್ನು ಕಳೆದಿದ್ದೇನೆ, ಈ ವಿಷಯಗಳೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ, ಆರೋಪಗಳು ಬಿಸಿಸಿಐ ಕಡೆಯಿಂದ ಬಂದವು ಮತ್ತು ಅವರೇ ನನ್ನ ಮೇಲೆ ನಿರ್ಧಾರ ತೆಗೆದುಕೊಂಡರು." ಎಂದು ಅವರು ಹೇಳಿದ್ದಾರೆ.

2012 ರಲ್ಲಿ, ಮುಂಬೈ ಮೂಲದ ಮಾಡೆಲ್‌ನಿಂದ ಲೈಂಗಿಕ ಶೋಷಣೆಯ ಆರೋಪಕ್ಕಾಗಿ ರವೂಫ್ ಸುದ್ದಿಯಲ್ಲಿದ್ದರು, ಮದುವೆ ಭರವಸೆ ನೀಡಿ ಮೋಸ ಮಾಡಿದ್ದಾರೆ ಎಂದು ಆ ಮಹಿಳೆ ಆರೋಪಿಸಿದ್ದರು. ಹತ್ತು ವರ್ಷಗಳ ಹಿಂದೆ ಆರೋಪಗಳನ್ನು ಅಲ್ಲಗಳೆದಿದ್ದ ರವೂಫ್, ಈಗಲೂ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. ಯುವತಿಯೆ ಆರೋಪದ ನಂತರವೂ ನಾನು ಮುಂದಿನ ಋತುವಿನ ಐಪಿಎಲ್‌ನಲ್ಲಿ ಅಂಪೈರ್ ಮಾಡಿದ್ದೆ ಎಂದು ರವೂಫ್ ಹೇಳಿದ್ದಾರೆ.

ಅಗ್ಗದ ಮತ್ತು ಕೈಗೆಟುಕುವ ಬೆಲೆಯ ಬಟ್ಟೆ, ಪಾದರಕ್ಷೆಗಳು ಮತ್ತು ಹಳೆಯ ಸರಕುಗಳ ಮಾರುಕಟ್ಟೆಗೆ ಪ್ರಸಿದ್ಧವಾಗಿರುವ ಲಾಹೋರ್‌ನಲ್ಲಿರುವ ಲಾಂಡಾ ಬಜಾರ್ ನಲ್ಲಿ ಸ್ವಂತ ಅಂಗಡಿಯೊಂದನ್ನು ರವೂಫ್‌ ಇಟ್ಟಿದ್ದಾರೆ.  ಬಟ್ಟೆ ಮತ್ತು ಬೂಟುಗಳ ಅಂಗಡಿಯನ್ನು ಹೊಂದಿರುವ ರವೂಫ್, ತಾನು ತನ್ನ ಸ್ವಂತ ಅಗತ್ಯಗಳನ್ನು ಪೂರೈಸಲು ಕೆಲಸ ಮಾಡುತ್ತಿಲ್ಲ ಬದಲಾಗಿ  ತನ್ನ ಸಿಬ್ಬಂದಿಗಳ ಅಗತ್ಯಗಳಿಗಾಗಿ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ.

“ನನಗೆ ದುರಾಸೆ ಇಲ್ಲ. ನಾನು ಬಹಳಷ್ಟು ಹಣವನ್ನು ನೋಡಿದ್ದೇನೆ. ನಾನು ಜಗತ್ತನ್ನು ಕಂಡಿದ್ದೇನೆ. ನನ್ನ ಒಬ್ಬ ಮಗ ವಿಶೇಷಚೇತನ. ಮತ್ತೊಬ್ಬ ಮಗ ಈಗಷ್ಟೇ ಪದವಿ ಮುಗಿಸಿ ಅಮೆರಿಕದಿಂದ ಮರಳಿ ಬಂದಿದ್ದಾರೆ” ಎಂದು ಅವರು ಹೇಳಿದ್ದಾರೆ. 

ನಾನು ಯಾವುದೇ ಕೆಲಸ ಮಾಡಿದರೂ ಉತ್ತುಂಗಕ್ಕೇರುವುದು ನನ್ನ ಅಭ್ಯಾಸ. ನಾನು ಅಂಗಡಿಯವನಾಗಿ ಕೆಲಸವನ್ನು ಪ್ರಾರಂಭಿಸಿದೆ, ನಾನು ಅದರ ಉತ್ತುಂಗವನ್ನು ತಲುಪಿದ್ದೇನೆ. ನಾನು ಕ್ರಿಕೆಟ್ ಆಡಿದ್ದೇನೆ,  ಅದರ ಉತ್ತುಂಗವನ್ನು ತಲುಪಿದ್ದೇನೆ ಮತ್ತು ನಂತರ ನಾನು ಅಂಪೈರ್ ಆಗಿ ಪ್ರಾರಂಭಿಸಿದಾಗ, ನಾನು ಇಲ್ಲಿಯೂ ಉತ್ತುಂಗಕ್ಕೇರಬೇಕು ಎಂದು ನನಗೆ ನಾನೇ ಹೇಳಿಕೊಂಡೆ ಎಂದು ರವೂಫ್‌ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News