ಉತ್ತರಪ್ರದೇಶ: 4 ಸಾವಿರ ವರ್ಷ ಹಳೆಯ ತಾಮ್ರದ ಆಯುಧಗಳು ಪತ್ತೆ

Update: 2022-06-24 15:03 GMT
Photo : twitter.com/AskAnshul

ಆಗ್ರಾ, ಜೂ. 24:  ಉತ್ತರಪ್ರದೇಶದ ಮಣಿಪುರಿಯ ಹೊಲವೊಂದರ ಮಣ್ಣಿನ ಅಡಿಯಲ್ಲಿ 4000 ವರ್ಷಗಳಷ್ಟು ಹಳೆಯ ತಾಮ್ರದ ಆಯುಧಗಳು ಪತ್ತೆಯಾಗಿವೆ. 

ಮಣಿಪುರಿಯ ಗಣೇಶಪುರ ಗ್ರಾಮದಲ್ಲಿ ಈ ತಿಂಗಳ ಆರಂಭದಲ್ಲಿ ರೈತರೊಬ್ಬರು ಗದ್ದೆಯನ್ನು ಸಮತಟ್ಟು ಮಾಡುವ ಸಂದರ್ಭ ಮಣ್ಣಿನ ಅಡಿಯಲ್ಲಿ ದೊಡ್ಡ ಸಂಖ್ಯೆಯ ತಾಮ್ರದ ಖಡ್ಗ ಹಾಗೂ ಈಟಿಗಳು ಪತ್ತೆಯಾಗಿವೆ. ಅವರು ಈ ಖಡ್ಗ ಹಾಗೂ ಈಟಿಗಳು ಚಿನ್ನ ಅಥವಾ ಬೆಳ್ಳಿಯಿಂದ ಮಾಡಿರಬಹುದೆಂದು ಮನೆಗೆ ಕೊಂಡೊಯ್ದಿದ್ದರು. ಆದರೆ, ಕೆಲವು ಸ್ಥಳೀಯರು ಪೊಲೀಸರಿಗೆ ಹಾಗೂ ಭಾರತದ ಪುರಾತತ್ವ ಸರ್ವೇಕ್ಷಾಣಾಲಯಕ್ಕೆ ಮಾಹಿತಿ ನೀಡಿದ್ದರು. ಅವರು ಕೂಡಲೇ ಕಾರ್ಯಪ್ರವೃತ್ತರಾದರು. 

ಪತ್ತೆಯಾದ ಆಯುಧಗಳಲ್ಲಿ ಪುರಾತತ್ವ ಶಾಸ್ತ್ರಜ್ಞರು ಕೆಲವನ್ನು ಆ್ಯಂಟೆನಾ ಖಡ್ಗ ಹಾಗೂ ಇನ್ನು ಕೆಲವನ್ನು ಕೊನೆಯಲ್ಲಿ ಕೊಂಡಿ ಇರುವ ಈಟಿ ಎಂದು ಕರೆದಿದ್ದಾರೆ. 
ಉತ್ತರಪ್ರದೇಶದ ಮಣಿಪುರಿಯ ಹೊಲದ ಮಣ್ಣಿನಲ್ಲಿ ಆಕಸ್ಮಿಕವಾಗಿ ಪತ್ತೆಯಾಯಾದ 4,000 ವರ್ಷಗಳಷ್ಟು ಹಳೆಯದಾದ ತಾಮ್ರದ ಆಯುಧಗಳು ತಾಮ್ರ ಯುಗಕ್ಕೆ ಸೇರಿದ್ದು ಎಂದು ತಜ್ಞರು ತಿಳಿಸಿದ್ದಾರೆ.

‘‘ಈ ತಾಮ್ರ ಆಯುಧಗಳ ಸಂಗ್ರಹ ತಾಮ್ರ ಯುಗಕ್ಕೆ ಸೇರಿವೆ. ಕಾವಿ ಬಣ್ಣದ ಕುಂಬಾರಿಕೆ ನೇರವಾಗಿ ಈ ಕಾಲಕ್ಕೆ ಸಂಬಂಧಿಸಿದ್ದು’’ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯದ ಪುರಾತತ್ವ ಶಾಸ್ತ್ರದ ನಿರ್ದೇಶಕ ಭುವನ್ ವಿಕ್ರಮ್ ತಿಳಿಸಿದ್ದಾರೆ. 
ತಾಮ್ರ ಯುಗದ ಸಂದರ್ಭ ಮೂಲಭೂತವಾಗಿ ನಗರ ನಾಗರಿಕತೆಯಲ್ಲಿ ಕಂಚು ಹರಪ್ಪನ್‌ರ ವಿಶೇಷತೆಯಾಗಿತ್ತು. ಆದರೆ, ಈಗ ಪತ್ತೆಯಾಗಿರುವ ತಾಮ್ರದ ಆಯುಧಗಳು ತಾಮ್ರದಿಂದ ತಯಾರಿಸಿಲ್ಲ. ಬದಲಾಗಿ ಕಂಚಿನಿಂದ ತಯಾರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News