ಬಳ್ಕುಂಜೆ ಕೈಗಾರಿಕಾ ವಲಯ ಸ್ಥಾಪನೆ; ಭೂ ಸ್ವಾಧೀನ ಅಧಿಸೂಚನೆ ರದ್ದುಪಡಿಸಬೇಕೆಂದು ಹೋರಾಟ ಸಮಿತಿ ಮನವಿ

Update: 2022-06-24 16:52 GMT

ಮಂಗಳೂರು: ಬಳ್ಕುಂಜೆ‌, ಕೊಲ್ಲೂರು, ಉಳೆಪಾಡಿ ಗ್ರಾಮಗಳ ಸುಮಾರು 1091 ಎಕರೆ ಜಮೀನನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಗೆ ಕೈಗಾರಿಕಾ ವಲಯ ನಿರ್ಮಾಣಕ್ಕೆ ಭೂ ಸ್ವಾಧೀನ ಪಡಿಸಿಕೊಳ್ಳುವ ಉದ್ದೇಶದಿಂದ ಸರಕಾರ ಹೊರಡಿಸಿರುವ ಅಧಿಸೂಚನೆಯನ್ನು ರದ್ದುಪಡಿಸಬೇಕೆಂದು ಬಳ್ಕುಂಜೆ ಹೋರಾಟ ಸಮಿತಿ ನೇತೃತ್ವದಲ್ಲಿ ಸಂತ್ರಸ್ತರು ಮುಲ್ಕಿ ತಹಶೀಲ್ದಾರ್ ರನ್ನು ಶುಕ್ರವಾರ ಅವರ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.

ಕರ್ನಾಟಕ ಸರಕಾರವು ಕೈಗಾರಿಕಾ ಹೊಸಾಹತು ಸ್ಥಾಪಿಸುವ ಉದ್ದೇಶದಿಂದ ಕೊಲ್ಲೂರು, ಬಳಕುಂಜೆ, ಉಳೆಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ 1091 ಎಕರೆ ಭೂ ಪ್ರದೇಶವನ್ನು ಸ್ವಾಧೀನ ಪಡೆದುಕೊಳ್ಳಲು ಉದ್ದೇಶಿಸಿ ಅಧಿಸೂಚನೆಯನ್ನು ಹೊರಡಿಸಿದ್ದು ಮಾರ್ಚ್ 21ರ ದಿನ ಪತ್ರಿಕೆಯಲ್ಲಿ ಪ್ರಕಟಗೊಂಡಿರುತ್ತದೆ. ಇದರಿಂದ ಮೂರು ಗ್ರಾಮಗಳ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಈ ಪ್ರದೇಶವು ನೈಸರ್ಗಿಕವಾಗಿ ಫಲವತ್ತಾಗಿದ್ದು, ಹಲವು ತಲೆಮಾರುಗಳಿಂದ ಜನರು ಕೃಷಿಯನ್ನು ಜೀವನಾಧರವನ್ನಾಗಿಸಿ ಶ್ರಮ ಜೀವಿಗಳಾಗಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಶಾಶ್ವತ ನೀರಿನ ವ್ಯವಸ್ಥೆಯನ್ನು ಮಾಡಿ ಒಣ ಭೂಮಿಯನ್ನು ಹಸನು ಮಾಡಿ ಭತ್ತ, ತೆಂಗು, ಅಡಿಕೆ, ಕಬ್ಬು, ಮಲ್ಲಿಗೆ, ರಬ್ಬರ್ ಗಿಡಗಳನ್ನು ನೆಟ್ಟು ತಮ್ಮ ಕೃಷಿ ಬದುಕನ್ನು ಸಮೃದ್ಧಿಗೊಳಿಸಿದ್ದಾರೆ. ಇದರ ಜೊತೆಗೆ ಹೈನುಗಾರಿಕೆ ನಡೆಸಿ ಕೋಳಿ ಸಾಕಣೆ ನಡೆಸಿ ಸ್ವಾವಲಂಬಿಗಳಾಗಿದ್ದಾರೆ. ಕರಿ ಮೆಣಸು, ಬಾಳೆ, ಗೇರು ಮುಂತಾದ ಉಪ ಕೃಷಿಗಳನ್ನು ಮಾಡುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಬಳ್ಕುಂಜೆಯ ಶಾಂಭವಿ ನದಿಯ ನೀರನ್ನು ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಎಂಟು ಪಂಚಾಯತ್‌ಗಳ ಸುಮಾರು ಮೂವತ್ತಾರು ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಈ ಯೋಜನೆಗೆ 25 ಕೋಟಿ ರೂಪಾಯಿ ವೆಚ್ಚ ತಗಲಿರುತ್ತದೆ. ಇಡೀ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಗಣೇಶ ಹಾಗೂ ತೆನೆ ಹಬ್ಬಕ್ಕೆ ಕಬ್ಬು ಸರಬರಾಜು ಮಾಡುವ ಖ್ಯಾತಿ ಬಳ್ಕುಂಜೆಗೆ ಇದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಮೂರು ಗ್ರಾಮದಲ್ಲಿ ಕಾಂತಾಬಾರೆ ಬೂದಾಬಾರೆ ಜನ್ಮ ಕ್ಷೇತ್ರ, ಉಳಿಪಾಡಿ ಗುಡ್ಡೆಸಾನಕ್ಕೆ ಒಳಪಟ್ಟ ಜಮೀನು, ಚರ್ಚ್, ಜಮೀನು, ಮಸೀದಿ, ಶಾಲೆಗಳು, ಕಾನ್ವೆಂಟ್, ಹಾಸ್ಟೆಲ್ ಮುಂತಾದ ಧಾರ್ಮಿಕ ಮತ್ತು ಶೈಕ್ಷಣಿಕವಾಗಿ ಮಹತ್ವದ ಕಟ್ಟಡಗಳು ಹಲವಾರು ವರ್ಷಗಳಿಂದ ನೆಲೆಗೊಂಡಿವೆ. ಇದಲ್ಲವೆ ಅನೇಕರು ಅವರ ಜಮೀನಿನಲ್ಲಿ ಆರಾಧಿಸಿ ಕೊಂಡು ಬಂದಿರುವ ದೈವಗಳು, ನಾಗಬನ, ಅದಲ್ಲದೆ ಮೂಲ ನಿವಾಸಿ ಕೊರಗ ಸಮಾಜದ 42 ದೈವಗಳು ನೆಲೆಗೊಂಡಿವೆ. ಮುಂದೆ ಇವುಗಳನ್ನು ಏನು ಮಾಡುವುದು ಎಂಬುದು ಗ್ರಾಮಸ್ಥರ ಪ್ರಶ್ನೆ ಎಂದು ತಮ್ಮ‌ ಅಳಲು ತೋಡಿಕೊಂಡಿದ್ದಾರೆ.

ಸ್ವಲ್ಪ ಪ್ರಮಾಣದ ಜಮೀನಿನ ಮಾಲಕರು ಪರ ಊರಿನಲ್ಲಿದ್ದು, ಅವರ ಜಮೀನನ್ನು ಅಭಿವೃದ್ಧಿಪಡಿಸಲಿಲ್ಲ. ಆದರೆ, ಇಲ್ಲಿಯೇ ವಾಸವಾಗಿರುವ ಕೃಷಿಯನ್ನೇ ಮಾಡಿ ಬೆವರು ಸುರಿಸಿ ಜೀವನ ಸಾಗಿಸುತ್ತಿದ್ದಾರೆ. ಸರಕಾರಿ ಅಧಿಕಾರಿಗಳು ಭಾವಿಸಿರುವಂತೆ ನಮ್ಮ ಜಮೀನು ಬರಡು ಭೂಮಿಯಲ್ಲ, ಬದಲಾಗಿ ಫಲವತ್ತಾದ ಕೃಷಿ ಭೂಮಿ ಎಂದು ಮನವರಿಕೆ ಮಾಡಿದರು.

ಪ್ರಸ್ತಾವಿಕ ಯೋಜನೆಯ ಪ್ರದೇಶದಲ್ಲಿ 85 ಎಕರೆ ಪ್ರದೇಶದಲ್ಲಿ ಭತ್ತ, 103 ಎಕರೆಯಲ್ಲಿ 5836 ತೆಂಗಿನ ಮರಗಳು, 102 ಎಕರೆಯಲ್ಲಿ 16,574 ಅಡಿಕೆ ಮರಗಳು, 60 ಎಕರೆ ಜಾಗದಲ್ಲಿ ತರಕಾರಿ, 3390 ಬಾಳೆಗಿಡಗಳು, 843 ಮಲ್ಲಿಗೆ ಗಿಡಗಳು, 2673 ಕರಿಮೆಣಸಿನ ಬಳ್ಳಿಗಳು, 3245 ಗೇರುಮರಗಳು, 891 ಮಾವಿನ ಮರಗಳು, 738 ಹಲಸಿನ ಮರಗಳು ಇರುತ್ತದೆ. ಮುಂದಿನ ದಿನಗಳಲ್ಲಿ, ಇಲ್ಲಿ ಕೈಗಾರಿಕೆ ಸ್ಥಾಪನೆಯಾದರೆ, ನಮ್ಮ ಊರು ಸರ್ವ ನಾಶವಾಗಲಿದೆ.

ಸುಂದರ ಪ್ರಕೃತಿಯ ಮರಗಿಡಗಳು, ಬೆಟ್ಟ ಗುಡ್ಡಗಳು ಇದರೊಂದಿಗೆ ಜೀವಮಾನವಿಡೀ ಮಾಡಿದ ರೈತರ ಸಾಧನೆ ಮಣ್ಣು ಪಾಲಾಗಲಿದೆ. ದೇಶದ ಅಭಿವೃದ್ಧಿಗೆ ಕೃಷಿ ಅಭಿವೃದ್ಧಿಯೂ ಮುಖ್ಯ. ತಮ್ಮ ಯೋಜನೆಯಿಂದ ರೈತರು ಕಂಗಾಲಾಗಿದ್ದು ಬೇರೊಂದು ಕಡೆಯಲ್ಲಿ ನೆಲೆಸಲು ಅವರಿಂದ ಸಾಧ್ಯವಿಲ್ಲ. ಈ ಯೋಜನೆಯ ಸುತ್ತ ಮುತ್ತಲಿನ ಪ್ರದೇಶದ ಜನರು, ಈ ಯೋಜನೆಯಿಂದ ಆತಂಕಕ್ಕೆ ಈಡಾಗಿದ್ದಾರೆ ಎಂದು ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಆದುದರಿಂದ ಸದ್ರಿ ಪ್ರಸ್ತಾವಿಕ ಯೋಜನೆಯ ಪ್ರದೇಶದಲ್ಲಿ ವಾಸವಾಗಿದ್ದು, ಕೃಷಿ ಮಾಡಿಕೊಂಡಿರುವ ರೈತರು ಹಾಗೂ ಮೂರು ಗ್ರಾಮಕ್ಕೆ ಸೇರಿದ ಜನರು ಈ ಯೋಜನೆಯನ್ನು ವಿರೋಧಿಸುತ್ತೇವೆ. ತಾವು ಈ ವಿಚಾರದಲ್ಲಿ ರೈತರ ಪರವಾಗಿ ನಿರ್ಧಾರ ತೆಗೆದುಕೊಂಡು ಪ್ರಸ್ತಾವಿತ ಭೂ ಸ್ವಾಧೀನ ಅಧಿಸೂಚನೆಯನ್ನು ಹಿಂಪಡೆದು ನಮ್ಮನ್ನು ನಮ್ಮ ನಮ್ಮ ಕೃಷಿ ಭೂಮಿಯನ್ನು ರಕ್ಷಿಸಿ ನಮ್ಮ ಬೇಡಿಕೆಗೆ ನ್ಯಾಯ ಒದಗಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದೆ.

ಗ್ರಾಮಸ್ಥರನ್ನು ಅಧಿಕಾರಿಗಳು ಬೆದರಿಸುವುದು, ಆಮಿಷ‌ಯೊಡ್ಡುವುದು ಖಂಡನೀಯ

ಗ್ರಾಮ ಪಂಚಾಯತ್ ಗಾಗಲೀ,  ಭೂ ಮಾಲಕರಿಗಾಗಲೀ ಯಾವುದೇ ಮಾಹಿತಿಯನ್ನು ನೀಡದೆ ಏಕಾಏಕೀ ಒಂದೆಡೆ ನೋಟಿಸ್‌ ನೀಡುತ್ತಾ ಇನ್ನೊಂದೆಡೆ ಸರ್ವೇ ನಡೆಸುವುದನ್ನು ಗ್ರಾಮಸ್ಥರು ಖಂಡಿಸುತ್ತೇವೆ. ಬಡ ಜನರು ನೋಟಿಸ್‌ಗೆ ಆಕ್ಷೇಪಣೆ ಸಲ್ಲಿಸಲು ಹೋದಾಗ ಅಧಿಕಾರಿಗಳು ಅವರಿಗೆ ಬೆದರಿಕೆ ಹಾಕುವ ಮತ್ತು ಹಣದ ಆಮಿಷ ಒಡ್ಡುವುದು ಖಂಡನೀಯ ಎಂದು ಗ್ರಾಮಸ್ಥರು ತಹಶೀಲ್ದಾರ್ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಅಸಮಾಧಾನ‌ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News