ಉತ್ತರ ಪ್ರದೇಶ : ನಕಲಿ ದಾಖಲೆ ಬಳಸಿ ಶಿಕ್ಷಕ ಹುದ್ದೆ ಪಡೆದ ಸಾವಿರಾರು ಮಂದಿ; ತನಿಖೆಯಿಂದ ಬಹಿರಂಗ

Update: 2022-06-25 10:52 GMT

 ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ನಕಲಿ ದಾಖಲೆಗಳನ್ನು ಬಳಸಿ 2,494 ಶಿಕ್ಷಕರನ್ನು ನೇಮಕಾತಿ ಮಾಡಲಾಗಿತ್ತು ಎಂದು ರಾಜ್ಯ ಪ್ರಾಥಮಿಕ ಶಿಕ್ಷಣ ಇಲಾಖೆ ಮತ್ತು ವಿಶೇಷ ಕಾರ್ಯ ಪಡೆ ನಡೆಸಿದ ತನಿಖೆ ಕಂಡುಕೊಂಡಿದೆ. ಈ ತನಿಖೆಯನ್ನು ರಾಜ್ಯಾದ್ಯಂತ ನಡೆಸಿದರೆ ಈ ರೀತಿ ನಕಲಿ ದಾಖಲೆಗಳ ಮೂಲಕ ನೇಮಕಾತಿ ಪಡೆದ ಶಿಕ್ಷಕರ ಸಂಖ್ಯೆ ಇನ್ನೂ  ಬಹಳ ಹೆಚ್ಚಾಗಬಹುದು ಎಂದು  ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಶಿಕ್ಷಣ ಇಲಾಖೆಯ ನೇಮಕಾತಿ ಕುರಿತಂತೆ ದೊಡ್ಡ ವಿವಾದ ಸೃಷ್ಟಿಯಾದ ನಂತರ ಉತ್ತರ ಪ್ರದೇಶ ಸರಕಾರ 2020 ರಲ್ಲಿ ತನಿಖೆಗೆ ಆದೇಶಿಸಿತ್ತು.

ತನಿಖೆಯ ವೇಳೆ 2,347ಎಫ್‌ಐಆರ್‌ಗಳನ್ನು ದಾಖಲಿಸಿ 2,461 ಶಿಕ್ಷಕರು ನಕಲಿ ದಾಖಲೆಗಳ ಮೂಲಕ ಉದ್ಯೋಗ ಪಡೆದಿದ್ದಾರೆಂದು ತಿಳಿದು ಬಂದ ನಂತರ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ಜೂನ್‌ 2020ರಲ್ಲಿ ಅನಾಮಿಕಾ ಶರ್ಮ ಎಂಬ ಹೆಸರಿನಲ್ಲಿ ಹಲವು ಮಹಿಳೆಯರು  ಸರಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿ ನೇಮಕಾತಿ ಪಡೆದಿದ್ದು ಬೆಳಕಿಗೆ ಬಂದ ನಂತರ ಹಲವರ ಬಂಧನ ನಡೆದಿತ್ತು.

ರಾಜ್ಯದಲ್ಲಿ ಶಿಕ್ಷಕರ ನೇಮಕಾತಿ ವೇಳೆ ಬಹಳಷ್ಟು ಪರಿಶೀಲನಾ ಪ್ರಕ್ರಿಯೆಗಳು ಇರುವ ಹೊರತಾಗಿಯೂ ಈ ರೀತಿ ನಕಲಿ ದಾಖಲೆ ಬಳಸಿ  ಉದ್ಯೋಗ ಪಡೆದಿರುವುದು ಅಚ್ಚರಿ ಹುಟ್ಟಿಸಿದೆ.

ಇನ್ನೊಂದು ಬೆಳವಣಿಗೆಯಲ್ಲಿ ನಕಲಿ ದಾಖಲೆಗಳ ಮೂಲಕ ಉದ್ಯೋಗ ಪಡೆದಿದ್ದಾರೆಂದು ಹೇಳಲಾದ ಶಿಕ್ಷಕರು ಸೇವೆಯಿಂದ ವಜಾಗೊಂಡ ನಂತರ  ನ್ಯಾಯಾಲಯದ ಕದ ತಟ್ಟುತ್ತಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News