ಮೋದೀಜಿ 19 ವರ್ಷಗಳ ಕಾಲ ನೋವನುಭವಿಸಿದರು: ಗುಜರಾತ್‌ ಹಿಂಸಾಚಾರ ತೀರ್ಪಿನ ಕುರಿತು ಅಮಿತ್‌ ಶಾ ಹೇಳಿಕೆ

Update: 2022-06-25 08:40 GMT

ಹೊಸದಿಲ್ಲಿ: 2002ರ ಗುಜರಾತ್ ಗಲಭೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ನರೇಂದ್ರ ಮೋದಿ ಮತ್ತು ಇತರರಿಗೆ ಎಸ್‌ಐಟಿ ಕ್ಲೀನ್ ಚಿಟ್ ನೀಡಿರುವುದನ್ನು ಪ್ರಶ್ನಿಸಿ ಝಾಕಿಯಾ ಜಾಫ್ರಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ ಮರುದಿನ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು “ ಪ್ರಕರಣದ ವಿರುದ್ಧದ ಸುದೀರ್ಘ ಹೋರಾಟದಲ್ಲಿ 19 ವರ್ಷಗಳ ಕಾಲ ಪ್ರಧಾನಿ ಮೋದಿ ನೋವು ಅನುಭವಿಸುತ್ತಿರುವುದನ್ನು ನೋಡಿದ್ದೇನೆ" ಎಂದು ಹೇಳಿಕೆ ನೀಡಿದ್ದಾಗಿ indianexpress.com ವರದಿ ಮಾಡಿದೆ.

ಸುದ್ದಿ ಸಂಸ್ಥೆ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ, ಅಮಿತ್‌ ಶಾ, "ಪ್ರಕರಣವು ಇಷ್ಟೆಲ್ಲಾ ಕಗ್ಗಂಟಾಗಿರುವುದರಿಂದ ಬಲವಾದ ಇಚ್ಛಾಶಕ್ತಿಯುಳ್ಳ ವ್ಯಕ್ತಿ ಮಾತ್ರ ಏನನ್ನೂ ಮಾತನಾಡದೇ ನಿಲ್ಲಬಹುದಿತ್ತು. ಆಗ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ಮೋದಿ ಅವರು ಯಾವಾಗಲೂ ಕಾನೂನಿನಲ್ಲಿ ನಂಬುತ್ತಿದ್ದರು" ಎಂದು ಅಮಿತ್‌ ಶಾ ಹೇಳಿದ್ದಾರೆ

"ಮೋದಿಜಿ ಅವರು ಯಾವುದೇ ಆರೋಪವನ್ನು ಹೊಂದಿದ್ದರೂ, ಅವರು ಯಾವತ್ತೂ ಕಾನೂನನ್ನು ನಂಬುತ್ತಾರೆ ಮತ್ತು ಸಂವಿಧಾನವನ್ನು ಎತ್ತಿಹಿಡಿಯುತ್ತಾರೆ ಎಂಬುದಕ್ಕೆ ಉದಾಹರಣೆ ನೀಡಿರುವುದು ನನಗೆ ಸಂತೋಷವಾಗಿದೆ" ಎಂದು ಶಾ ಹೇಳಿದರು.

ತೀರ್ಪಿನಿಂದ ಅಸಮಾಧಾನಗೊಂಡವರನ್ನು ಉದ್ದೇಶಿಸಿ ಮಾತನಾಡಿದ ಶಾ, "ಸೆಷನ್ ಕೋರ್ಟ್, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಅದೇ ತೀರ್ಪು ನೀಡಲಾಗಿದೆ ಎಂದು ನಾನು ನಂಬುತ್ತೇನೆ. ನೀವು ಇನ್ನೂ ತೀರ್ಪನ್ನು ಸ್ವೀಕರಿಸದಿದ್ದರೆ, ಏನು ಮಾಡಬಹುದು?" ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News