ಮರಣದಂಡನೆ ಶಿಕ್ಷೆ ರದ್ದುಗೊಳಿಸುವ ಇರಾದೆ ಯಾವತ್ತೂ ಇರಲಿಲ್ಲ: ಸುಪ್ರೀಂಕೋರ್ಟ್ ಸ್ಪಷ್ಟನೆ

Update: 2022-06-25 10:58 GMT

ಹೊಸದಿಲ್ಲಿ: ಮರಣದಂಡನೆಯನ್ನು ರದ್ದುಪಡಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಸ್ಪಷ್ಟಪಡಿಸಿದೆಯಲ್ಲದೆ "ಮರಣದಂಡನೆಯನ್ನು ಅನಗತ್ಯ ಎಂದು ಪರಿಗಣಿಸಲು ನ್ಯಾಯಾಂಗ ಯಾವತ್ತೂ ಯತ್ನಿಸಿಲ್ಲ ಮತ್ತು 'ಅರ್ಹ ಪ್ರಕರಣಗಳಲ್ಲಿ' ಈ ಶಿಕ್ಷೆಯನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದೆ.

ರಾಜಸ್ಥಾನದಲ್ಲಿ 2013ರಲ್ಲಿ ಏಳೂವರೆ ವರ್ಷದ ಭಿನ್ನಚೇತನ ಹಾಗೂ ಅಂಗವಿಕಲೆ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ವ್ಯಕ್ತಿಯೊಬ್ಬನಿಗೆ ನೀಡಿದ್ದ ಮರಣದಂಡನೆ ಶಿಕ್ಷೆಯನ್ನು ಎತ್ತಿ ಹಿಡಿಯುವ ವೇಳೆ ಜಸ್ಟಿಸ್ ಎ.ಎಂ ಖನ್ವಿಲ್ಕರ್ ಅವರ ನೇತೃತ್ವದ ತ್ರಿಸದಸ್ಯ ಪೀಠ ಮೇಲಿನಂತೆ ಹೇಳಿದೆ.

ಲೈಂಗಿಕ ಹಿಂಸೆ ಪ್ರಕರಣಗಳಲ್ಲಿ ಅಪರಾಧಿಗಳಿಗೆ ನೀಡುವ ಗಲ್ಲು ಶಿಕ್ಷೆಯು ಇತರರಿಗೆ ಇಂತಹ ಅಪರಾಧಗಳನ್ನು ನಡೆಸುವುದರಿಂದ ಹಿಂಜರಿಯುವಂತೆ ಮಾಡುವುದಿಲ್ಲ ಹಾಗೂ  ಹೆಚ್ಚಾಗಿ ಬಡವರ ವಿರುದ್ಧವೇ ಇಂತಹ ತೀರ್ಪುಗಳು ಬರುತ್ತವೆ ಎಂಬ ಕೆಲವರು ವಾದಿಸುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟಿನ ಈ ತೀರ್ಪು ಮಹತ್ವ ಪಡೆದಿದೆ.

ಮರಣದಂಡನೆ ವಿಚಾರವು ಕಾನೂನು ಪುಸ್ತಕಗಳಲ್ಲಿ ಇರುವ ತನಕ ಅದನ್ನೊಂದು ಪರ್ಯಾಯ ಶಿಕ್ಷೆ ಎಂಬುದನ್ನು ನ್ಯಾಯಾಂಗಕ್ಕೆ ಅವಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್ ಅದೇ ಸಮಯ ಅಪರೂಪದಲ್ಲಿ ಅತ್ಯಂತ ಅಪರೂಪ ಪ್ರಕರಣದಲ್ಲಿ ಈ ಶಿಕ್ಷೆ ನೀಡಬೇಕು ಎಂದು ಹೇಳಿದೆ.

ಈ ನಿರ್ದಿಷ್ಟ ಪ್ರಕರಣದಲ್ಲಿ ಅಪರಾಧ ಬಹಳ ಬರ್ಬರವಾಗಿದ್ದು  ಹಾಗೂ ಸಂತ್ರಸ್ತೆಯ ತಲೆಯನ್ನು ವಸ್ತುಶಃ ಹೊಡೆದು ಸಾಯಿಸಲಾಗಿರುವುದರಿಂದ ಈ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆ ಖಾಯಂಗೊಳಿಸಲಾಗಿದೆ ಎಂದು ಹೇಳಿದೆ.

ಅಪರಾಧಿಯ ಮಾನಸಿಕ ಸ್ಥಿತಿಗತಿ ಅವಲೋಕನ ವರದಿಯನ್ನು ಪಡೆಯಬೇಕೆಂಬ ಆತನ ಪರ ವಕೀಲರ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆಯಲ್ಲದೆ ಅಪರಾಧ ನಡೆಸಿದ ಬಳಿಕವೂ ಆತನ ವರ್ತನೆ ಗಮನಿಸಿದಾಗ ಆತ ಸುಧಾರಿಸುವುದಿಲ್ಲ  ಎಂದು ಹೇಳಿದೆ. ಅಪರಾಧಿಯು ತನ್ನ ಸಹಕೈದಿಯನ್ನು ಕೊಲೆಗೈದ ಆರೋಪವನ್ನೂ ಎದುರಿಸುತ್ತಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News