ವಾಯುಮಾಲಿನ್ಯ ಭಾರತೀಯರ ಜೀವಿತಾವಧಿಯನ್ನು 5 ವರ್ಷ ಕಡಿಮೆ ಮಾಡುತ್ತದೆ: ವರದಿ

Update: 2022-06-25 16:52 GMT

ಹೊಸದಿಲ್ಲಿ, ಜೂ. 25: ಭಾರತದಲ್ಲಿ ವಾಯು ಮಾಲಿನ್ಯ ನಾಗರಿಕರ ನಿರೀಕ್ಷಿತ ಜೀವಿತಾವಧಿಯನ್ನು ಸರಾಸರಿ ಐದು ವರ್ಷ ಕಡಿಮೆ ಮಾಡುತ್ತದೆ  ಎಂಬ ಅಮೆರಿಕ ಮೂಲದ ಚಿಂತನ ಚಿಲುಮೆಯ ವರದಿಯ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಶುಕ್ರವಾರ ನೋಟಿಸು ಜಾರಿ ಮಾಡಿದೆ.

ಅಮೆರಿಕದ ಚಿಂತನ ಚಿಲುಮೆಯ ಅಧ್ಯಯನದ ಕುರಿತ ಮಾಧ್ಯಮ ವರದಿಯನ್ನು ಆಯೋಗ ಸ್ವಯಂಪ್ರೇರಿತವಾಗಿ ಪರಿಗಣಿಸಿದೆ. ಅಲ್ಲದೆ, ಇದರ ಬಗ್ಗೆ ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ. ಅಲ್ಲದೆ, 2019ರಲ್ಲಿ ಆರಂಭಿಸಲಾದ ರಾಷ್ಟ್ರೀಯ ಸ್ವಚ್ಛ ವಾಯು ಕಾರ್ಯಕ್ರಮದ ಕುರಿತ ಸ್ಥಿತಿಗತಿ ವರದಿ ಸಲ್ಲಿಸುವಂತೆ ಕೂಡ ಸಚಿವಾಲಯ ಹೇಳಿದೆ.
2014ರ ಒಳಗೆ 122 ನಗರಗಳಲ್ಲಿ ಕಣಗಳ ಸಾಂದ್ರತೆಯನ್ನು ಶೇ. 20ರಿಂದ ಶೇ. 30ಕ್ಕೆ ಇಳಿಕೆ ಮಾಡುವ ಗುರಿಯನ್ನು ಈ ಯೋಜನೆ ಹೊಂದಿದೆ.

‘‘ಮಾಧ್ಯಮ ವರದಿಯ ಅಂಶಗಳು ನಿಜವಾಗಿದ್ದರೆ, ಅದು ಜೀವಿಸುವ ಹಕ್ಕಿನ ವಿಷಯದ ಕುರಿತ ಗಂಭೀರ ಪ್ರಶ್ನೆಗಳನ್ನು ಎತ್ತುತ್ತವೆ ಎಂದು ಆಯೋಗ ಗಮನಿಸಿದೆ’’ ಎಂದು ಮಾನವ ಹಕ್ಕುಗಳ ಆಯೋಗ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಚಿಕಾಗೊ ವಿಶ್ವವಿದ್ಯಾನಿಲಯದ ಇಂಧನ ನೀತಿ ಸಂಸ್ಥೆಯು ಜೂನ್ 14ರಂದು ಈ ಅಧ್ಯಯನವನ್ನು ಬಿಡುಗಡೆ ಮಾಡಿದೆ. ಈ ಅಧ್ಯಯನದಲ್ಲಿ ದಿಲ್ಲಿ ಜಗತ್ತಿನಲ್ಲೇ ಅತಿ ಹೆಚ್ಚು ಮಾಲಿನ್ಯಗೊಂಡ ಮಹಾ ನಗರ ಎಂದು ತಿಳಿದು ಬಂದಿದೆ. ದಿಲ್ಲಿಯ ವಾಯು ಮಾಲಿನ್ಯ ನಾಗರಿಕರ ಜೀವಿತಾವಧಿಯನ್ನು ಸುಮಾರು 10 ವರ್ಷ ಕಡಿಮೆ ಮಾಡಿದೆ ಎಂದಿದೆ.

ಸೂಕ್ಷ್ಮ ಕಣಗಳ ಮಾಲಿನ್ಯದ ಕುರಿತ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳನ್ನು ಅನುಸರಿಸಿದರೆ ಸರಾಸರಿ ಜೀವಿತಾವಧಿ ಏನಾಗಬಹುದು ಎಂಬ ಆಧಾರದಲ್ಲಿ ನಿರೀಕ್ಷಿತ ಜೀವಿತಾವಧಿಯ ಇಳಿಕೆಯನ್ನು ಸಂಶೋಧಕರು ಲೆಕ್ಕ ಹಾಕಿದ್ದಾರೆ.

ವಾರ್ಷಿಕ ಸರಾಸರಿ ಪಿಎಂ 2.5 ಸಾಂದ್ರತೆ ಪ್ರತಿ ಘನ ಮೀಟರ್‌ಗೆ 5 ಮೈಕ್ರೋಗ್ರಾಂಗಳಿಗಿಂತ ಹೆಚ್ಚಿರಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News