ಜಾಗತಿಕ ಆಹಾರ ಕೊರತೆಯಿಂದ ಮಹಾದುರಂತ‌ ಸಂಭವಿಸಬಹುದು: ವಿಶ್ವಸಂಸ್ಥೆ ಮುಖ್ಯಸ್ಥರ ಎಚ್ಚರಿಕೆ

Update: 2022-06-25 15:46 GMT

ಜಾಗತಿಕ ಆಹಾರ ಕೊರತೆಯಿಂದ ಮಹಾದುರಂತ‌ ಸಂಭವಿಸಬಹುದು: ವಿಶ್ವಸಂಸ್ಥೆ ಮುಖ್ಯಸ್ಥರ ಎಚ್ಚರಿಕೆ

ವಿಶ್ವಸಂಸ್ಥೆ, ಜೂ.25: ಹವಾಮಾನ ವೈಪರೀತ್ಯ, ಕೊರೋನ ಸಾಂಕ್ರಾಮಿಕದಿಂದ ಉಂಟಾಗಿರುವ ಸಮಸ್ಯೆಗಳ ಜತೆ ಉಕ್ರೇನ್ನಲ್ಲಿನ ಯುದ್ಧದ ಬಿಕ್ಕಟ್ಟು ಸೇರಿಕೊಂಡು ಅಸಾಮಾನ್ಯ ಜಾಗತಿಕ ಆಹಾರದ ಬಿಕ್ಕಟ್ಟನ್ನು ರೂಪಿಸಿದ್ದು ಈಗಾಗಲೇ ನೂರಾರು ಮಿಲಿಯನ್ ಜನರ ಮೇಲೆ ಪರಿಣಾಮ ಬೀರಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಹೇಳಿದ್ದಾರೆ. 

2022ರಲ್ಲಿ ಬಹುಕ್ಷಾಮಗಳನ್ನು ಘೋಷಿಸುವ ನಿಜವಾದ ಅಪಾಯವಿದೆ ಮತ್ತು 2023ರಲ್ಲಿ ಪರಿಸ್ಥಿತಿ ಇನ್ನಷ್ಟು ಕೆಟ್ಟದಾಗಬಹುದು ಎಂದು ಬರ್ಲಿನ್ನಲ್ಲಿ ನಡೆಯುತ್ತಿರುವ ಅಭಿವೃದ್ಧಿಹೊಂದಿದ ದೇಶಗಳ ಮುಖಂಡರ ಸಭೆಯನ್ನುದ್ದೇಶಿಸಿ ವೀಡಿಯೊ ಸಂದೇಶದಲ್ಲಿ ಅವರು ಹೇಳಿದ್ದಾರೆ. ಏರುತ್ತಿರುವ ರಸಗೊಬ್ಬರ ಮತ್ತು ಇಂಧನದ ಬೆಲೆಯನ್ನು ನಿಭಾಯಿಸಲು ವಿಶ್ವದಾದ್ಯಂತ ರೈತರು ಹೆಣಗಾಡುತ್ತಿರುವ ಹಿನ್ನೆಲೆಯಲ್ಲಿ ಏಶ್ಯಾ, ಆಫ್ರಿಕಾ ಮತ್ತು ಅಮೆರಿಕಾದ್ಯಂತ ಕೃಷಿ ಚಟುವಟಿಕೆಗೆ ಸಮಸ್ಯೆಯಾಗಲಿದೆ. 

ಆಹಾರ ರಫ್ತಿನ ಮೇಲೆ ಈ ವರ್ಷ ಆಗಿರುವ ಸಮಸ್ಯೆ ಮುಂದಿನ ವರ್ಷದ ಜಾಗತಿಕ ಆಹಾರ ಕೊರತೆಯ ರೂಪ ತಳೆಯಲಿದೆ. ಅಂತಹ ದುರಂತದ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳಿಂದ ಯಾವುದೇ ದೇಶವು ಹೊರಗುಳಿಯುವುದಿಲ್ಲ ಎಂದವರು ಹೇಳಿದ್ದಾರೆ. ಉಕ್ರೇನ್ನ ಆಹಾರ ಧಾನ್ಯಗಳ ರಫ್ತಿಗೆ ಅವಕಾಶ ಒದಗಿಸುವ ಮತ್ತು ರಶ್ಯದ ಆಹಾರವಸ್ತು ಮತ್ತು ರಸಗೊಬ್ಬರಗಳು ಯಾವುದೇ ಅಡೆತಡೆಯಿಲ್ಲದೆ ವಿಶ್ವ ಮಾರುಕಟ್ಟೆ ಪ್ರವೇಶಿಸಲು ಸಾಧ್ಯವಾಗುವಂತಹ ಒಪ್ಪಂದವೊಂದನ್ನು ವಿಶ್ವಸಂಸ್ಥೆಯ ಪ್ರತಿನಿಧಿಗಳು ರೂಪಿಸುತ್ತಿದ್ದಾರೆ ಎಂದ ಅವರು, ಬಡ ದೇಶಗಳಿಗೆ ಸಾಲ ಮನ್ನಾದಂತಹ ಯೋಜನೆಯ ಅಗತ್ಯವಿದೆ. 
ಇದರಿಂದ ಖಾಸಗಿ ಕ್ಷೇತ್ರಕ್ಕೂ ನೆರವಾಗುತ್ತದೆ ಎಂದರು. 

ಬರ್ಲಿನ್ ಸಭೆಯಲ್ಲಿ ಮಾತನಾಡಿದ ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲಿನಾ ಬೇರ್ಬಾಕ್, ಪಾಶ್ಚಿಮಾತ್ಯ ದೇಶಗಳ ನಿರ್ಬಂಧ ಜಾಗತಿಕ ಆಹಾರ ಕೊರತೆಗೆ ಕಾರಣ ಎಂಬ ರಶ್ಯದ ಹೇಳಿಕೆ ಸಂಪೂರ್ಣವಾಗಿ ಅಸಮರ್ಥನೀಯ ಎಂದಿದ್ದಾರೆ. 

ಕಳೆದ ವರ್ಷದ ಮೇ ಮತ್ತು ಜೂನ್ ತಿಂಗಳಿನಲ್ಲಿ ರಫ್ತು ಮಾಡಿರುವಷ್ಟೇ ಪ್ರಮಾಣದ ಗೋಧಿಯನ್ನು ಈ ವರ್ಷದ ಈ ಎರಡು ತಿಂಗಳಲ್ಲಿ ರಶ್ಯ ರಫ್ತು ಮಾಡಿದೆ. ಜಾಗತಿಕ ಆಹಾರ ಕೊರತೆಗೆ ರಶ್ಯ ಕಾರಣ. ಉಕ್ರೇನ್ ಮೇಲಿನ ರಶ್ಯದ ಆಕ್ರಮಣವು ಅಲೆಯನ್ನು ಸುನಾಮಿಯನ್ನಾಗಿಸಿದೆ ಎಂದವರು ಹೇಳಿದ್ದಾರೆ. ನಿರ್ಬಂಧದ ಕಾರಣ ನೀಡಿ ಆಹಾರ ವಸ್ತುಗಳನ್ನು ಜಾಗತಿಕ ಮಾರುಕಟ್ಟೆಗೆ ಪೂರೈಸದ ರಶ್ಯದ ಕ್ರಮ ಸಮರ್ಥನೀಯವಲ್ಲ. ನಿರ್ಬಂಧದಲ್ಲಿ ಆಹಾರ, ಆಹಾರ ಉತ್ಪನ್ನಗಳು, ರಸಗೊಬ್ಬರ ಇತ್ಯಾದಿಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News