ಬುಲೆಟ್‌ ಗಾಯದೊಂದಿಗೆ ಬಂಧಿತ ಐಎಎಸ್‌ ಅಧಿಕಾರಿಯ ಪುತ್ರ ಮೃತ್ಯು: ವಿಜಿಲೆನ್ಸ್‌ ಅಧಿಕಾರಿಗಳ ವಿರುದ್ಧ ಆರೋಪ

Update: 2022-06-25 15:56 GMT
Nikhil Choudhary/Twitter

ಹೊಸದಿಲ್ಲಿ: ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಭಾರತೀಯ ಆಡಳಿತ ಸೇವೆಯ (IAS) ಅಧಿಕಾರಿ ಸಂಜಯ್ ಪೊಪ್ಲಿ ಅವರ 26 ವರ್ಷದ ಪುತ್ರ ಶನಿವಾರ ಬುಲೆಟ್ ಗಾಯಗಳಿಂದ ಮೃತಪಟ್ಟಿದ್ದಾನೆ ಎಂದು ndtv.com ವರದಿ ಮಾಡಿದೆ.

ಕಾರ್ತಿಕ್ ಪೋಪ್ಲಿ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದರೆ, ರಾಜ್ಯ ವಿಜಿಲೆನ್ಸ್ ಬ್ಯೂರೋದ ಅಧಿಕಾರಿಗಳು ಅವರನ್ನು ಕೊಂದಿದ್ದಾರೆ ಎಂದು ಅವರ ಕುಟುಂಬ ಆರೋಪಿಸಿದೆ.

ಚಂಡೀಗಢದಲ್ಲಿ ಮಧ್ಯಾಹ್ನ 1.30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಪಂಜಾಬ್ ವಿಜಿಲೆನ್ಸ್ ಬ್ಯೂರೋದ ತಂಡವು ಸೆಕ್ಟರ್ 11 ರಲ್ಲಿ ಸಂಜಯ್ ಪೊಪ್ಲಿ ಅವರ ಮನೆಗೆ ಹುಡುಕಾಟ ನಡೆಸಲು ಆಗಮಿಸಿತ್ತು ಎಂದು Theindianexpress.com ವರದಿ ಮಾಡಿದೆ.

ಕಾರ್ತಿಕ್ ಪೊಪ್ಲಿ ಮನೆಯ ಮೊದಲ ಮಹಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಅವರು ಕಾನೂನು ಪದವೀಧರರಾಗಿದ್ದರು. ಪ್ರಾಥಮಿಕ ತನಿಖೆಯಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

"ನಾವು ತನಿಖೆಯನ್ನು ಪ್ರಾರಂಭಿಸಿದ್ದೇವೆ" ಎಂದು ಅಪರಿಚಿತ ಚಂಡೀಗಢ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ನಾವು , ಪಂಜಾಬ್ ವಿಜಿಲೆನ್ಸ್ ಅಧಿಕಾರಿಗಳು ಅವರನ್ನು ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಆರೋಪಿಸಿರುವ ಕಾರ್ತಿಕ್ ಅವರ ಕುಟುಂಬ ಸದಸ್ಯರ ಹೇಳಿಕೆಗಳನ್ನು ದಾಖಲಿಸುತ್ತೇವೆ" ಎಂದು ಹೇಳಿದ್ದಾರೆ.

ಚಂಡೀಗಢ ಪೊಲೀಸ್‌ನ ಹಿರಿಯ ಅಧೀಕ್ಷಕ ಕುಲದೀಪ್ ಚಾಹಲ್, ಐಎಎಸ್ ಅಧಿಕಾರಿಯ ಪುತ್ರ ತನ್ನ ತಂದೆಯ ಪರವಾನಗಿ ಪಡೆದ ಗನ್ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿದ್ದಾಗಿ ಎನ್‌ಡಿಟಿವಿ ವರದಿ ಮಾಡಿದೆ. ಆದರೆ, ಮೃತ ಕಾರ್ತಿಕ್ ಪೊಪ್ಲಿ ತಾಯಿ ಆತನನ್ನು ಕೊಲೆಗೈಯಲಾಗಿದೆ ಆರೋಪಿಸಿದ್ದಾರೆ.

"ಭಗವಂತ್ ಮಾನ್ ನಮ್ಮ ಮಗನನ್ನು ಕೊಂದಿದ್ದಾನೆ" ಎಂದು ಅವಳು ಹೇಳಿದ್ದು, "ವಿಜಿಲೆನ್ಸ್ ತಂಡವು ನಮ್ಮ ನಿವಾಸದಲ್ಲಿತ್ತು ಮತ್ತು ಅವರು ನನ್ನ ಮಗನನ್ನು ಕೊಂದರು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. "ವಿಜಿಲೆನ್ಸ್ ಜನರು ಕಾರ್ತಿಕ್ ಅನ್ನು ಮಹಡಿಗೆ ಕರೆದೊಯ್ದರು ಮತ್ತು ನಾನು ಮೇಲೆ ಹೋದಾಗ ಅವರು ನನ್ನ ಮಗನಿಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು" ಎಂದು ಅವರು ಆರೋಪಿಸಿದ್ದಾರೆ.

ಸಂಜಯ್ ಪೊಪ್ಲಿ ಅವರನ್ನು ಜೂನ್ 20 ರಂದು ಭ್ರಷ್ಟಾಚಾರ ಪ್ರಕರಣದಲ್ಲಿ ಕೊಳಚೆನೀರಿನ ಪೈಪ್ ಹಾಕುವ ಟೆಂಡರ್‌ಗಳನ್ನು ತೆರವುಗೊಳಿಸಲು ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಬಂಧಿಸಲಾಗಿತ್ತು. ರಾಜ್ಯ ವಿಜಿಲೆನ್ಸ್ ತಂಡವು ಅವರ ಮನೆಯಿಂದ ಕಾಟ್ರಿಡ್ಜ್‌ಗಳ ಸಂಗ್ರಹವನ್ನು ವಶಪಡಿಸಿಕೊಂಡಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಅವರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿಯೂ ಪ್ರಕರಣ ದಾಖಲಾಗಿತ್ತು.

ಪೊಪ್ಲಿ ಅವರು ಪಂಜಾಬ್ ಒಳಚರಂಡಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು. ಮೇ ತಿಂಗಳಲ್ಲಿ, ಅವರನ್ನು ಪಂಜಾಬ್ ಸರ್ಕಾರದ ಪಿಂಚಣಿ ಇಲಾಖೆಯಲ್ಲಿ ನಿರ್ದೇಶಕರನ್ನಾಗಿ ಮಾಡಲಾಯಿತು. ಘಟನೆಯ ಬಗ್ಗೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಆಘಾತ ವ್ಯಕ್ತಪಡಿಸಿದ್ದಾರೆ.

ಈ ನಡುವೆ, ಪಂಜಾಬ್ ವಿಜಿಲೆನ್ಸ್ ಬ್ಯೂರೋದ ಉಪ ಪೊಲೀಸ್ ಅಧೀಕ್ಷಕ ಅಜಯ್ ಕುಮಾರ್, ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾಗಿ ಎಎನ್‌ಐ ವರದಿ ಮಾಡಿದೆ. ಆದರೆ ಈ ಆರೋಪಗಳು ಆಧಾರರಹಿತವಾಗಿವೆ ಎಂದು ಅವರು ಹೇಳಿದರು. "ನಾವು ವಸ್ತುಗಳನ್ನು ಹಿಂಪಡೆಯಲು ಅಲ್ಲಿಗೆ ಹೋಗಿದ್ದೇವೆ. ನಾವು ಮನೆಯೊಳಗೆ ಕಾಲಿಡಲೇ ಇಲ್ಲ. ಘಟನೆಯ ಬಗ್ಗೆ ನಮಗೆ ನಂತರ ತಿಳಿಯಿತು” ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News