ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಆಗಿರುವ ಬಗ್ಗೆ ಮಾಹಿತಿ ಇದ್ದರೂ ವರದಿ ಮಾಡದ ಅಧಿಕಾರಿಗಳಿಗೂ ಶಿಕ್ಷೆ: ಪ್ರಭಾಕರ ಆಚಾರ್

Update: 2022-06-26 13:39 GMT

ಉಡುಪಿ : ಪೋಕ್ಸೊ ತಿದ್ದುಪಡಿ ಕಾಯ್ದೆ ಪ್ರಕಾರ ಪೋಕ್ಸೊ ಅಪರಾಧಿಗೆ ಇರುವಂತೆ ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಆಗಿರುವ ಬಗ್ಗೆ ಮಾಹಿತಿ ಇದ್ದರೂ ವರದಿ ಮಾಡದ ಅಧಿಕಾರಿಗಳಿಗೂ ಕಾನೂನಿನಲ್ಲಿ ಶಿಕ್ಷೆ ಇದೆ ಎಂದು ಉಡುಪಿ ಜಿಪಂ ಎನ್‌ಆರ್‌ಎಲ್‌ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ ಆಚಾರ್ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರವಿವಾರ ಆಯೋಜಿಸಲಾದ ಪೋಕ್ಸೊ ಕಾಯ್ದೆ ಕುರಿತು ಉಡುಪಿ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ಮತ್ತು ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾಹಿತಿ ನೀಡಿದರು.

ಉಡುಪಿ ಜಿಲ್ಲೆಯು ಪೋಕ್ಸೊ ಕಾಯ್ದೆಯನ್ನು ಅನುಷ್ಠಾನಕ್ಕೆ ತರುವಲ್ಲಿ ಮತ್ತು ಅಪರಾಧ ಪತ್ತೆ ಹಚ್ಚುವಲ್ಲಿ ರಾಜ್ಯದಲ್ಲಿ ಮುಂಚೂಣಿಯಲ್ಲಿದೆ. ಉಡುಪಿಯಲ್ಲಿ ಹೊರ ಜಿಲ್ಲೆಯವರು ಅತಿಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವುದರಿಂದ ಇಂತಹ ಕೃತ ನಡೆಯುತ್ತಿದೆಯೇ ಹೊರತು ಜಿಲ್ಲೆಯ ಜನರಿಂದ ತೀರಾ ಕಡಿಮೆ. ಇಲ್ಲಿನ  ಪೊಲೀಸ್ ಅಧಿಕಾರಿಗಳು ಮಕ್ಕಳ ಸ್ನೇಹಿಯಾಗಿ ಕೆಲಸ ಮಾಡಿದ ಕಾರಣ ಈ ಅಪರಾಧ ಕಡಿಮೆಯಾಗಲು ಸಾಧ್ಯವಾಗಿದೆ ಎಂದರು.

ಮಕ್ಕಳು ಮುಂದಿನ ಭವಿಷ್ಯವಾದ ಕಾರಣ ಪೊಲೀಸ್ ಅಧಿಕಾರಿಗಳು ಎಂತಹ ಒತ್ತಡದ ಕೆಲಸ ಇದ್ದರೂ ಕೂಡಾ ನೊಂದ ಮಕ್ಕಳಿಗೆ ನ್ಯಾಯ ನೀಡಬೇಕು. ಸಂತ್ರಸ್ತ ಮಕ್ಕಳ ಪುನರ್ವಸತಿ ಆರೋಗ್ಯ ಶಿಕ್ಷಣ ನೀಡಬೇಕಾಗಿರು ವದರಿಂದ ಪ್ರಕರಣ ಬಂದ ತಕ್ಷಣ ವರದಿಯನ್ನು ಮಕ್ಕಳ ಕಲ್ಯಾಣ ಸಮಿತಿಗೆ ನೀಡಬೇಕು ಎಂದು ಅವರು ಹೇಳಿದರು.

ಜಿಲ್ಲೆಯ ೨೩ ಪೊಲೀಸ್ ಠಾಣೆಯ ಅಧಿಕಾರಿಗಳು ತರಬೇತಿ ಭಾಗವಹಿಸಿ,  ಪೋಕ್ಸೋ ಕಾಯ್ದೆ ವಿಷಯದಲ್ಲಿ ಚರ್ಚೆ ನಡೆಸಿದರು. ಜಿಲ್ಲಾ ಹೆಚ್ಚುವರಿ  ಪೊಲೀಸ್ ವರಿಷ್ಠಾಧಿಕಾರಿ ಎಸ್.ಟಿ.ಸಿದ್ದಲಿಂಗಪ್ಪ, ಉಡುಪಿ ಪೊಲೀಸ್ ಉಪಾಧೀಕ್ಷ ಸುಧಾಕರ್ ನಾಯ್ಕ್ ಉಪಸ್ಥಿತರಿದ್ದರು. ಬ್ರಹ್ಮಾವರ ಪೊಲೀಸ್ ಉಪ ನಿರೀಕ್ಷಕಿ ಮುಕ್ತಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News