ಐಎಂಎಫ್ ಜತೆಗಿನ ಒಪ್ಪಂದಕ್ಕೆ ಸೋಮವಾರ ಅಂತಿಮ ಮುದ್ರೆ: ಪಾಕಿಸ್ತಾನ

Update: 2022-06-26 16:34 GMT

ಇಸ್ಲಮಾಬಾದ್, ಜೂ.26: ಪಾಕಿಸ್ತಾನಕ್ಕೆ ಆರ್ಥಿಕ ಪರಿಹಾರ ಪ್ಯಾಕೇಜ್ ಒದಗಿಸುವ ನವೀಕೃತ ಒಪ್ಪಂದಕ್ಕಾಗಿ ಆರ್ಥಿಕ ಮತ್ತು ಹಣಕಾಸು ಕಾರ್ಯನೀತಿಯನ್ನು ಹಸ್ತಾಂತರಿಸಲು ಐಎಂಎಫ್ ಯೋಚಿಸಿರುವುದರಿಂದ ಸೋಮವಾರ(ಜೂನ್ 27)ದ ವೇಳೆಗೆ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್) ಜತೆಗಿನ ಒಪ್ಪಂದಕ್ಕೆ ಅಂತಿಮ ಮುದ್ರೆ ಬೀಳುವ ನಿರೀಕ್ಷೆಯಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ರವಿವಾರ ಹೇಳಿದೆ.

ಆರ್ಥಿಕ ಸ್ಥಿತಿಯ ಕುರಿತ ತ್ರೈಮಾಸಿಕ ವರದಿಯಲ್ಲಿ ನಕಾರಾತ್ಮಕ ಅಂಶಗಳಿದ್ದರೂ ಐಎಂಎಫ್ ನೆರವಿನ ಮರುಸ್ಥಾಪನೆಯ ಸಾಧ್ಯತೆ ನಿಚ್ಚಳವಾಗಿದೆ ಎಂದು ಸಂಸತ್ತಿನಲ್ಲಿ ವಿವರ ನೀಡಿದ ಪಾಕಿಸ್ತಾನದ ವಿತ್ತಸಚಿವ ಮಿಫ್ತಾ ಇಸ್ಮಾಯಿಲ್ ಹೇಳಿದ್ದಾರೆ. ಇದಕ್ಕೂ ಮುನ್ನ ಮಾತನಾಡಿದ್ದ ಪ್ರಧಾನಿ ಶಹಬಾರ್ ಶರೀಫ್, ಐಎಂಎಫ್‌ನೊಂದಿಗಿನ ಷರತ್ತುಗಳನ್ನು ಅಂತಿಮಗೊಳಿಸಲಾಗಿದೆ ಎಂದು ಪ್ರತಿಪಾದಿಸಿದರು.

ಐಎಂಎಫ್ ಮುಂದಿರಿಸಿದ್ದ ಷರತ್ತಿನಂತೆ ಶುಕ್ರವಾರ ಪಾಕ್ ಸರಕಾರ ವೇತನ ವರ್ಗದವರ ಮೇಲಿನ ತೆರಿಗೆ ದರವನ್ನು ಹೆಚ್ಚಿಸಿತ್ತು ಮತ್ತು ಜೂನ್ 10ರಂದು ವೇತನದಾರರಿಗೆ ನೀಡಿದ್ದ ತೆರಿಗೆ ವಿನಾಯತಿ ಘೋಷಣೆಯನ್ನು ಹಿಂಪಡೆದಿತ್ತು. ಹೀಗೆ ಐಎಂಎಫ್ ಮುಂದಿರಿಸಿದ್ದ ಬಹುತೇಕ ಎಲ್ಲಾ ಷರತ್ತುಗಳನ್ನೂ ಈಡೇರಿಸಿರುವುದರಿಂದ ಒಪ್ಪಂದದ ಕುರಿತ ‘ಮೆಮೊರ್ಯಾಂಡಮ್ ಆಫ್ ಫೈನಾನ್ಶಿಯಲ್ ಆ್ಯಂಡ್ ಇಕನಾಮಿಕ್ ಪಾಲಿಸೀಸ್(ಎಂಇಎಫ್‌ಪಿ)ಯನ್ನು ಸೋಮವಾರ ಹಸ್ತಾಂತರಿಸುವ ನಿರೀಕ್ಷೆಯಿದೆ ಎಂದು ವಿತ್ತ ಸಚಿವಾಲಯ ಹೇಳಿದೆ.

 ಕಳೆದ ಕೆಲ ದಿನಗಳಿಂದ ಐಎಂಎಫ್, ವಿತ್ತ ಸಚಿವಾಲಯ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ನಿರಂತರ ಮಾತುಕತೆ ನಡೆಸುತ್ತಿವೆ. ವಿದ್ಯುತ್ ದರಗಳನ್ನು ಹೆಚ್ಚಿಸುವ ಸರಕಾರದ ಕಾರ್ಯತಂತ್ರಕ್ಕೆ ಸಂಬಂಧಿಸಿದ ಸಭೆ ವಿತ್ತ ಸಚಿವರ ಅಧ್ಯಕ್ಷತೆಯಲ್ಲಿ ನಡೆದಿದೆ ಎಂದು ಜಿಯೊ ನ್ಯೂಸ್ ವರದಿ ಮಾಡಿದೆ. ಈ ಮಧ್ಯೆ ಸಿಮೆಂಟ್, ಸಕ್ಕರೆ, ಉಕ್ಕು, ತೈಲ ಮತ್ತು ಅನಿಲ, ಆರ್‌ಎಲ್‌ಎನ್‌ಜಿ ಟರ್ಮಿನಲ್, ಜವಳಿ, ಬ್ಯಾಂಕಿಂಗ್, ಆಟೊ ಉದ್ಯಮ, ತಂಬಾಕು, ರಸಗೊಬ್ಬರ, ವಾಯುಯಾನ, ರಾಸಾಯನಿಕ ಮತ್ತು ಪಾನೀಯ ಕ್ಷೇತ್ರದ 13 ಬೃಹತ್ ಕೈಗಾರಿಕೆಗಳ ಮೇಲೆ ಸರಕಾರ 10% ಸೂಪರ್‌ಟ್ಯಾಕ್ಸ್ ವಿಧಿಸಿದೆ. ಪಾಕಿಸ್ತಾನದಲ್ಲಿ ಸುಮಾರು 30,000 ಆಭರಣಗಳ ಅಂಗಡಿಗಳಿದ್ದು ಪ್ರತೀ ಅಂಗಡಿಗೆ 40,000 ರೂ. ತೆರಿಗೆಯನ್ನು ಸರಕಾರ ಪ್ರಸ್ತಾವಿಸಿದೆ. ಮುಂದಿನ ಬಜೆಟ್‌ಗೆ ‘ಪ್ರೈಸ್ ಡಿಫರೆನ್ಶಿಯಲ್ ಕ್ಲೇಮ್’ ವಿಭಾಗಕ್ಕೆ 225 ಬಿಲಿಯನ್ ರೂ. ಅನುದಾನ ಒದಗಿಸುವ ಸರಕಾರದ ಪ್ರಸ್ತಾವನೆಗೆ ಐಎಂಎಫ್ ಆಕ್ಷೇಪ ಎತ್ತಿದ್ದು ಇದು ಸುಮಾರು 350ರಿಂದ 450 ಬಿಲಿಯನ್ ರೂ.ಗೆ ಏರಿಕೆಯಾಗಬಹುದು ಎಂದು ಅಂದಾಜಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News