ಅಫ್ಘಾನ್‌ಗೆ 10 ಮಿಲಿಯನ್ ಡಾಲರ್ ನಿಧಿ ನಿಗದಿ: ವಿಶ್ವಸಂಸ್ಥೆ

Update: 2022-06-26 17:39 GMT

ವಿಶ್ವಸಂಸ್ಥೆ, ಜೂ.26: ಭೂಕಂಪದಿಂದ ಜರ್ಝರಿತಗೊಂಡಿರುವ ಅಫ್ಘಾನಿಸ್ತಾನಕ್ಕೆ ವಿಶ್ವಸಂಸ್ಥೆಯ ಕೇಂದ್ರ ತುರ್ತು ಪ್ರತಿಕ್ರಿಯೆ ನಿಧಿ(ಯುಎನ್‌ಸಿಇಆರ್‌ಎಫ್)ನಿಂದ 10 ಮಿಲಿಯನ್ ಡಾಲರ್ ಮೊತ್ತವನ್ನು ನಿಗದಿಗೊಳಿಸಲಾಗಿದ್ದು ಭೂಕಂಪದಿಂದ ಪರಿಣಾಮಕ್ಕೆ ಒಳಗಾಗಿರುವ ಜನತೆಗೆ ನೆರವು ನೀಡಲಾಗುವುದು ಎಂದು ವಿಶ್ವಸಂಸ್ಥೆ ರವಿವಾರ ಘೋಷಿಸಿದೆ. ಈ ನೆರವನ್ನು ತಕ್ಷಣ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಾನವೀಯ ವ್ಯವಹಾರ ಮತ್ತು ತುರ್ತು ಪರಿಹಾರ ಸಂಯೋಜನೆಯ ಉಪ-ಪ್ರಧಾನ ಕಾರ್ಯದರ್ಶಿ ಮಾರ್ಟಿನ್ ಗ್ರಿಫಿತ್ ಹೇಳಿದ್ದಾರೆ. 

ಅಫ್ಘಾನಿಸ್ತಾನದಲ್ಲಿ ಜೂನ್ 22ರಂದು ಬೆಳಿಗ್ಗೆ ಭೀಕರ ಭೂಕಂಪ ಸಂಭವಿಸಿದ್ದು ಹಲವು ಮನೆಗಳು ಕುಸಿದು ಬಿದ್ದಿವೆ. ಕನಿಷ್ಟ 1000 ಮಂದಿ ಮೃತಪಟ್ಟಿದ್ದು ಸುಮಾರು 1,500 ಮಂದಿ ಗಾಯಗೊಂಡಿದ್ದರು. ಪಾಕಿಸ್ತಾನದ ಗಡಿಭಾಗದ ಸನಿಹದಲ್ಲಿರುವ ಖೋಸ್ಟ್ ನಗರದಿಂದ ಸುಮಾರು 44 ಕಿ.ಮೀ ದೂರದಲ್ಲಿ ಭೂಕಂಪ ಸಂಭವಿಸಿದ್ದು ರಿಕ್ಟರ್ ಮಾಪನದಲ್ಲಿ 6.1 ತೀವ್ರತೆಯನ್ನು ದಾಖಲಿಸಿತ್ತು. ತಕ್ಷಣ ವಿಶ್ವದಾದ್ಯಂತದ ದೇಶಗಳು, ಸಂಘಟನೆಗಳು ಅಫ್ಘಾನಿಸ್ತಾನಕ್ಕೆ ನೆರವು ಒದಗಿಸಿವೆ. ಭಾರತ ಶುಕ್ರವಾರ 2ನೇ ಕಂತಿನ ನೆರವನ್ನು ರವಾನಿಸಿದೆ. ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ ಜೆಪಿ ಸಿಂಗ್ ಅವರು ನೆರವನ್ನು ತಾಲಿಬಾನ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಾಂಕೇತಿಕವಾಗಿ ಹಸ್ತಾಂತರಿಸಿದರು.

 ತಾತ್ಕಾಲಿಕ ಶಿಬಿರ ಸ್ಥಾಪಿಸಲು ಅಗತ್ಯವಿರುವ ಟೆಂಟ್‌ಗಳು, ಪ್ಲಾಸ್ಟಿಕ್ ಶೀಟ್‌ಗಳು, ಮಲಗುವ ಚೀಲಗಳು, ಕಂಬಳಿಗಳು, ಮಲಗುವ ಚಾಪೆ ಇತ್ಯಾದಿ ಅಗತ್ಯದ ವಸ್ತುಗಳನ್ನು ಭೂಕಂಪದಿಂದ ನಲುಗಿರುವ ಅಫ್ಘಾನ್‌ನ ಜನತೆಗೆ ಭಾರತ ರವಾನಿಸಿದೆ. ಗುರುವಾರ ಭಾರತದ ನೆರವಿನ ಪ್ರಥಮ ಕಂತನ್ನು ಹಸ್ತಾಂತರಿಸಲಾಗಿತ್ತು. ಜತೆಗೆ, ಅಫ್ಘಾನ್‌ಗೆ ಹರಿದು ಬರುವ ಮಾನವೀಯ ನೆರವಿನ ಉಪಕ್ರಮಗಳನ್ನು ಸಂತ್ರಸ್ತರಿಗೆ ತಲುಪಿಸುವ ಕಾರ್ಯದ ಸಂಯೋಜನೆಗೆ ನೆರವಾಗಲು ಭಾರತವು ಕಾಬೂಲ್‌ನಲ್ಲಿನ ರಾಯಭಾರಿ ಕಚೇರಿಗೆ ತಂಡವೊಂದನ್ನು ರವಾನಿಸಿದೆ. ಅಫ್ಘಾನ್‌ನಲ್ಲಿ ಮಾನವೀಯ ನೆರವಿನ ಉಪಕ್ರಮ ಮುಂದುವರಿಸಲು ತಂತ್ರಜ್ಞರ ತಂಡವನ್ನು ಮರಳಿ ಕಳಿಸಿರುವ ಭಾರತದ ಈ ಕ್ರಮವನ್ನು ಸ್ವಾಗತಿಸುವುದಾಗಿ ತಾಲಿಬಾನ್ ಪ್ರತಿಕ್ರಿಯಿಸಿದೆ.

ಈ ಮಧ್ಯೆ, ಯುರೋಪಿಯನ್ ಕಮಿಷನ್ ಕೂಡಾ 1 ಮಿಲಿಯನ್ ಯುರೋ ಮೊತ್ತದ ಆರ್ಥಿಕ ನೆರವನ್ನು ಅಫ್ಘಾನ್‌ಗೆ ಘೋಷಿಸಿದೆ. ಇದರಿಂದ ಭೂಕಂಪದಿಂದ ತೀವ್ರ ಹಾನಿಗೊಳಗಾಗಿರುವ ಪ್ರದೇಶದ ಸುಮಾರು 2,70,000 ಜನತೆಗೆ ನೆರವು ಒದಗಿಸಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯೂ ತಕ್ಷಣ ಸ್ಪಂದಿಸಿದ್ದು ಜೂನ್ 22ರಂದು 10 ಟನ್‌ಗಳಷ್ಟು ವೈದ್ಯಕೀಯ ನೆರವಿನ ಸಾಮಗ್ರಿಗಳ ಸಹಿತ ಇತರ ವಸ್ತುಗಳನ್ನು ಅಫ್ಘಾನ್‌ಗೆ ರವಾನಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News