ಸಿಎಂಗೆ ಆಹ್ವಾನವಿಲ್ಲದ ಹಿನ್ನೆಲೆ: ಕೇಂದ್ರ ಆಯೋಜಿಸಿದ್ದ ಆರೋಗ್ಯ ಶಿಬಿರ ಬಹಿಷ್ಕರಿಸಿದ ಜಾರ್ಖಂಡ್ ಸಚಿವ

Update: 2022-06-27 01:56 GMT
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ (PTI)

ಖುಂಟಿ: ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದ ಕಾರಣ ಜಾರ್ಖಂಡ್ ಆರೋಗ್ಯ ಸಚಿವ ಬನ್ನಾ ಗುಪ್ತಾ ರವಿವಾರ ಖುಂಟಿ ಜಿಲ್ಲೆಯಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಆಯೋಜಿಸಿದ್ದ ಒಂದು ದಿನದ ಮೆಗಾ ಆರೋಗ್ಯ ಶಿಬಿರವನ್ನು ಬಹಿಷ್ಕರಿಸಿದ್ದಾರೆ.

ಶಿಬಿರಕ್ಕೆ ಜಿಲ್ಲಾಧಿಕಾರಿಯವರಿಂದ ಆಹ್ವಾನ ಪಡೆದ ಬಳಿಕ ಖುಂಟಿ ಪಟ್ಟಣದ ಬಿರ್ಸಾ ಕಾಲೇಜು ಮೈದಾನದ ಸ್ಥಳಕ್ಕೆ ಗುಪ್ತಾ ಹೋಗಿದ್ದರು.  ಆದರೆ ವೇದಿಕೆಗೆ ಹೋಗಲಿಲ್ಲ, ಆಹ್ವಾನಿತರ ಪಟ್ಟಿಯಲ್ಲಿ ಸೋರೆನ್ ಅವರ ಹೆಸರು ಇಲ್ಲದಿರುವುದನ್ನು ಕಂಡು ಕಾರ್ಯಕ್ರಮಕ್ಕೆ ಹಾಜರಾಗದೆ ಹಿಂತಿರುಗಿದ್ದಾರೆ.

ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. ರಾಜ್ಯಪಾಲ ರಮೇಶ್ ಬೈಸ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

“ಸಂಘಟಕರು ವೇದಿಕೆಯ ಮೇಲೆ ನನ್ನ ಪೋಸ್ಟರ್ ಅನ್ನು ಹಾಕಿದ್ದರು ಆದರೆ ನಮ್ಮ ಸಿಎಂಗೆ ಆಹ್ವಾನ ನೀಡದಿರುವುದು ಅಥವಾ ಅವರ ಪೋಸ್ಟರ್ ಅನ್ನು ಪ್ರದರ್ಶಿಸದಿರುವುದು ನನಗೆ ನೋವು ತಂದಿದೆ. ನಮ್ಮದು ಚುನಾಯಿತ ಸರ್ಕಾರ ಮತ್ತು ಹೇಮಂತ್ ಸೋರೆನ್ ನಮ್ಮ ನಾಯಕ, ಅವರಿಗೆ ಯಾವುದೇ ಅವಮಾನವನ್ನು ನಾನು ಸಹಿಸುವುದಿಲ್ಲ. ಸಿಎಂ ಅನ್ನು ಅವಮಾನಿಸುವುದು ರಾಜ್ಯವನ್ನು ಅವಮಾನಿಸಿದಂತೆ,'' ಎಂದು ಗುಪ್ತಾ ಪಿಟಿಐಗೆ ತಿಳಿಸಿದ್ದಾರೆ.

ಬಡ ಜನರ ಅನುಕೂಲಕ್ಕಾಗಿ ಇಂತಹ ಮೆಗಾ ಆರೋಗ್ಯ ಶಿಬಿರಗಳನ್ನು ಹೃದಯಪೂರ್ವಕವಾಗಿ ಸ್ವಾಗತಿಸುತ್ತಿರುವ ಗುಪ್ತಾ, ಕೇಂದ್ರವು ಇಂತಹ ಕಾರ್ಯಕ್ರಮಗಳಿಂದ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಕೇಂದ್ರ ಮತ್ತು ರಾಜ್ಯದ ನಡುವಿನ ಭಿನ್ನಾಭಿಪ್ರಾಯಗಳು ಹೊಸದಲ್ಲ, ಆದರೆ ದ್ವೇಷವನ್ನು ವ್ಯಕ್ತಪಡಿಸುವುದು ಅಥವಾ ಅದರ ನೆಪದಲ್ಲಿ ಯಾರನ್ನೂ ಅವಮಾನಿಸುವುದು ಸ್ವೀಕಾರಾರ್ಹವಲ್ಲ” ಎಂದು ಅವರು ಹೇಳಿದ್ದಾರೆ.

ಖುಂಟಿ ಜಿಲ್ಲಾಧಿಕಾರಿ ಶಶಿರಂಜನ್ ಮಾತನಾಡಿ, ಜಿಲ್ಲೆಯಾದ್ಯಂತ 50 ಸಾವಿರಕ್ಕೂ ಹೆಚ್ಚು ಬುಡಕಟ್ಟು ಜನಾಂಗದವರು ಇದರಲ್ಲಿ ಪಾಲ್ಗೊಳ್ಳಲು ನಿರ್ಧರಿಸಲಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆಯ ಜವಾಬ್ದಾರಿ ಮಾತ್ರ ಜಿಲ್ಲಾಡಳಿತದ ಮೇಲಿದೆ. ಈ ಕಾರ್ಯಕ್ರಮಕ್ಕೆ ಆಹ್ವಾನಗಳನ್ನು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಕಳುಹಿಸಿದೆಯೇ ಹೊರತು ಜಿಲ್ಲಾಡಳಿತವಲ್ಲ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News