ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಶಾಲೆಗಳಲ್ಲಿ ʼಸಂಸ್ಕೃತʼ ಭಾಷೆ ಕಲಿಕೆ ಕಡ್ಡಾಯ ಮಾಡಲು ಆರೆಸ್ಸೆಸ್ ಮನವಿ

Update: 2022-06-27 08:02 GMT
ಗುಜರಾತ್‌ ಶಿಕ್ಷಣ ಸಚಿವ ಜಿತು ವಘಾನಿ Photo: Twitter

ಹೊಸದಿಲ್ಲಿ: ಈ ವರ್ಷದ ಎಪ್ರಿಲ್ ತಿಂಗಳಿನಲ್ಲಿ ಗುಜರಾತ್ ಶಿಕ್ಷಣ ಸಚಿವ ಜಿತು ವಘಾನಿ ಮತ್ತು  ಇತರ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರತ್ನಾಕರ್ ಹಾಗೂ ಆರೆಸ್ಸೆಸ್ ಮತ್ತದರ ಸಹಸಂಸ್ಥೆಗಳ ಪ್ರತಿನಿಧಿಗಳು ರಾಷ್ಟ್ರೀಯ ಶಿಕ್ಷಣ ನೀತಿ 2020 ಜಾರಿ ಕುರಿತು ನಡೆಸಿದ ಸಭೆಯಲ್ಲಿ ರಾಜ್ಯದ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಸಂಸ್ಕೃತವನ್ನು ಕಡ್ಡಾಯ ವಿಷಯವನ್ನಾಗಿಸಬೇಕೆಂಬ ಬೇಡಿಕೆಯನ್ನು ಆರೆಸ್ಸೆಸ್ ಮುಂದಿಟ್ಟಿತ್ತು ಎಂದು Thewire.in ವರದಿ ಮಾಡಿದೆ.

ವಾರದಲ್ಲಿ ಸಂಸ್ಕೃತ ಕಲಿಕೆಯ ಕನಿಷ್ಠ ಆರು ಅವಧಿಗಳಿರಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದ ಆರೆಸ್ಸೆಸ್ ಮತ್ತದರ ಸಹ-ಸಂಘಟನೆಗಳು ಪ್ರತಿನಿಧಿಗಳು ಆಗ್ರಹಿಸಿದ್ದರೆನ್ನಲಾಗಿದೆ.

ಸಭೆಯಲ್ಲಿ ವಿದ್ಯಾ ಭಾರತಿ, ಶೈಶಿಕ್ ಮಹಾಸಂಘ್, ಸಂಸೃತ ಭಾರತಿ, ಭಾರತೀಯ ಶಿಕ್ಷಣ್ ಮಂಡಲ್ ಪ್ರತಿನಿಧಿಗಳು ಭಾಗವಹಿಸಿದ್ದರು ಹಾಗೂ ಸಂಸ್ಕೃತ ಕಲಿಕೆಯತ್ತವೇ ಒತ್ತು ನೀಡಿದ್ದರು.

ಶಾಲೆಗಳಲ್ಲಿ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆ ಕಲಿಸಬೇಕು, ವೈದಿಕ ಗಣಿತ ಕಡ್ಡಾಯಗೊಳಿಸಬೇಕು, ಉಪನಿಷದ್, ವೇದಗಳಿಂದ ಮೌಲ್ಯಾಧರಿತ ಶಿಕ್ಷಣ ಒದಗಿಸಬೇಕು ಮತ್ತು ಖಾಸಗಿ ವಿಶ್ವವಿದ್ಯಾಲಯಗಳನ್ನು ನಿಯಂತ್ರಿಸಬೇಕೆಂಬ ಬೇಡಿಕೆಗಳನ್ನೂ ಆರೆಸ್ಸೆಸ್ ಸಹ ಸಂಘಟನೆಗಳು ಮುಂದಿಟ್ಟಿದ್ದವು ಎಂದು ತಿಳಿದು ಬಂದಿದೆ.

ಗುಜರಾತಿಯನ್ನು ಪ್ರಥಮ ಭಾಷೆ ಹಾಗೂ ಸಂಸ್ಕೃತವನ್ನು ದ್ವಿತೀಯ ಭಾಷೆಯನ್ನಾಗಿ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ ಸಂಘಟನೆಗಳು ತೃತೀಯ ಭಾಷೆಯ ಆಯ್ಕೆಯನ್ನು ಸರಕಾರದ ವಿವೇಚನೆಗೆ ಬಿಟ್ಟಿವೆ ಎನ್ನಲಾಗಿದೆ.

ಬಿಎಎಂಎಸ್ ಕೋರ್ಸುಗಳಿಗೆ ಪ್ರವೇಶ ಪಡೆಯಲಿಚ್ಛಿಸುವ ವಿದ್ಯಾರ್ಥಿಗಳು 11 ಮತ್ತು 12ನೇ ತರಗತಿಗಳಲ್ಲಿ ಕಡ್ಡಾಯವಾಗಿ ಸಂಸ್ಕೃತ ಕಲಿತಿರಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟಿವೆ. ರಾಜ್ಯ ಸರಕಾರ ಮತ್ತು ಆರೆಸ್ಸೆಸ್ ಹಾಗೂ ಅದರ ಸಹಸಂಸ್ಥೆಗಳ ನಡುವೆ ಇನ್ನೊಂದು ಸಭೆ ಜುಲೈ ತಿಂಗಳಿನಲ್ಲಿ ನಡೆಯಲಿದೆ ಎಂಬ ಮಾಹಿತಿಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News