ಲೈಂಗಿಕ ದೌರ್ಜನ್ಯ ಪ್ರಕರಣ: ಮಲಯಾಳಂ ನಟ, ನಿರ್ಮಾಪಕ ವಿಜಯ್‌ ಬಾಬು ಬಂಧನ

Update: 2022-06-27 09:03 GMT

ಕೊಚ್ಚಿ: ಮಲಯಾಳಂ ನಟ ಮತ್ತು ನಿರ್ಮಾಪಕ ವಿಜಯ್ ಬಾಬು ಅವರನ್ನು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿಸಲಾಗಿದೆ. ವಿಚಾರಣೆಗಾಗಿ ಎರ್ನಾಕುಲಂ ಸೌತ್ ಪೊಲೀಸ್ ಠಾಣೆಗೆ ಹಾಜರಾದ ವೇಳೆ ಅವರನ್ನು ಬಂಧಿಸಲಾಯಿತು. ಜೂನ್ 22 ರಂದು ಅವರಿಗೆ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿತ್ತು. ʼಸಿನಿಮಾದಲ್ಲಿ ಅವಕಾಶ ನೀಡುತ್ತೇನೆಂದು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆʼ ಎಂದು ನಟಿಯೋರ್ವರು ಆರೋಪಿಸಿದ್ದ ಹಿನ್ನೆಲೆಯಲ್ಲಿ ವಿಜಯ್ ಬಾಬು ವಿರುದ್ಧ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಾಗಿತ್ತು.

ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪುರಸ್ಕರಿಸುವಾಗ, ಕೇರಳ ಹೈಕೋರ್ಟ್ ರಾಜ್ಯವನ್ನು ತೊರೆಯದಂತೆ ಪಾಸ್‌ಪೋರ್ಟ್ ಸಲ್ಲಿಸುವಂತೆ ಕೇಳಿತ್ತು.

ಸೋಮವಾರದಿಂದ ಜುಲೈ 3 ರವರೆಗೆ ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಅವರನ್ನು ಪ್ರಶ್ನಿಸಲು ತನಿಖಾ ತಂಡಕ್ಕೆ ಅನುಮತಿ ನೀಡಲಾಗಿದೆ. ನಿನ್ನೆ, ಮಲಯಾಳಂ ಚಲನಚಿತ್ರ ಕಲಾವಿದರ ಸಂಘ (ಅಮ್ಮ) ಅವರಿಗೆ ಬೆಂಬಲವನ್ನು ನೀಡಿದ್ದು, ನ್ಯಾಯಾಲಯದ ತೀರ್ಪಿನ ನಂತರವೇ ಯಾವುದೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿಕೆ ನೀಡಿತ್ತು.

ಸಾಮಾಜಿಕ ಜಾಲತಾಣದಲ್ಲಿ ಸಂತ್ರಸ್ತೆ ಯುವ ನಟಿಯ ಗುರುತನ್ನು ಬಹಿರಂಗಪಡಿಸಿದ ಗುರುತರ ಆರೋಪವೂ ಅವರ ಮೇಲಿದೆ. ವಿಜಯ್ ಬಾಬು ಏಪ್ರಿಲ್ ಅಂತ್ಯದಲ್ಲಿ ದುಬೈಗೆ ತೆರಳಿದ್ದರು, ಅದೇ ಸಮಯದಲ್ಲಿ ಮಹಿಳೆಯೊಬ್ಬರು ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ದಾಖಲಿಸಿದ್ದರು. ಕೊಚ್ಚಿ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿದ ನಂತರ ವಿಜಯ್‌ ಬಾಬು ವಿದೇಶಕ್ಕೆ ಪರಾರಿಯಾಗಿದ್ದರು. 39 ದಿನಗಳ ಕಾಲ ವಿದೇಶದಲ್ಲಿದ್ದ ವಿಜಯ್ ಬಾಬು ಜೂನ್ 1 ರಂದು ಕೊಚ್ಚಿಗೆ ಮರಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News