ಜನಪ್ರಿಯ ಮಲಯಾಳಂ ನಟ ಎನ್.ಡಿ ಪ್ರಸಾದ್ ಆತ್ಮಹತ್ಯೆ

Update: 2022-06-27 12:47 GMT
Photo: Twitter

ಕೊಚ್ಚಿ: ಜನಪ್ರಿಯ ಮಲಯಾಳಂ ನಟ ಎನ್ ಡಿ ಪ್ರಸಾದ್ (43) ಅವರು ಕೊಚ್ಚಿಯ ಕಲಮಸ್ಸೇರಿ ಪ್ರದೇಶದಲ್ಲಿರುವ ತಮ್ಮ ನಿವಾಸದ ಹೊರಗೆ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ. ಜೂನ್ 25ರಂದು ಈ ಘಟನೆ ನಡೆದಿದೆ. ತಮ್ಮ ತಂದೆಯ ಶವ ಮರದಲ್ಲಿ ನೇತಾಡುತ್ತಿರುವುದನ್ನು ಕಂಡು ಅವರ ಮಕ್ಕಳು ನೆರೆಹೊರೆಯವರಿಗೆ ಮಾಹಿತಿ ನೀಡಿದ ನಂತರ ಪೊಲೀಸರಿಗೆ ತಿಳಿಸಲಾಯಿತು. ನಟ ಪ್ರಸಾದ್ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಹಲವಾರು ಮಲಯಾಳಂ ಚಲನಚಿತ್ರಗಳಲ್ಲಿ ಪ್ರಸಾದ್ ನಟಿಸಿದ್ದರೂ ಆಕ್ಷನ್ ಹೀರೋ ಬಿಜು ಚಿತ್ರದಲ್ಲಿನ ಅವರ ಅಭಿನಯ ಅವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿತ್ತು.

ಕೌಟುಂಬಿಕ ಸಮಸ್ಯೆಗಳು ಆತ್ಮಹತ್ಯೆಗೆ ಕಾರಣವಾಗಿರಬೇಕೆಂದು ಶಂಕಿಸಲಾಗಿದೆ. ಕೆಲ ತಿಂಗಳುಗಳಿಂದ ಅವರ ಪತ್ನಿ ಅವರಿಂದ ಪ್ರತ್ಯೇಕಗೊಂಡು ಬೇರೆಯೇ ವಾಸಿಸುತ್ತಿದ್ದಾರೆ.

ಈ ಹಿಂದೆ ಅವರು ಡ್ರಗ್ಸ್ ಸೇವನೆಯ ಆರೋಪವನ್ನೂ ಎದುರಿಸಿದ್ದರು. 2021ರಲ್ಲಿ ಅವರನ್ನು ಅಬಕಾರಿ ಇಲಾಖೆಯು ಹ್ಯಾಶೀಶ್ ಮತ್ತು ಗಾಂಜಾ ಹೊಂದಿದ್ದಕ್ಕಾಗಿ ಬಂಧಿಸಿತ್ತು. ಅವರ ಬಳಿಯಿಂದ ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಳ್ಳಲಾಗಿತ್ತು.

ಇಬಾ ಮತ್ತು ಕರ್ಮಣಿ ಚಿತ್ರಗಳಲ್ಲಿನ ಅವರ ಅಭಿನಯವೂ ಸಾಕಷ್ಟು ಗಮನ ಸೆಳೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News