2024 ರ ಚುನಾವಣೆಯಲ್ಲಿ ʼಮುಸ್ಲಿಮರನ್ನು ದಾರಿತಪ್ಪಿಸದಂತೆ ರಕ್ಷಿಸಲುʼ ಕಾರ್ಯಕರ್ತರಿಗೆ ಮಾಯಾವತಿ ಕರೆ

Update: 2022-06-27 14:39 GMT

ಲಕ್ನೋ: ಅಜಂಗಢದ ಲೋಕಸಭಾ ಉಪಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯ ಸಾಧನೆಯನ್ನು ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಅವರು ಶ್ಲಾಘಿಸಿದ್ದಾರೆ. ಇದೇ ವೇಳೆ, 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಮುಸ್ಲಿಮರನ್ನು ತಪ್ಪು ದಾರಿಗೆಳೆಯುವುದನ್ನು ತಡೆಯಲು ಬಿಎಸ್‌ಪಿ ಕಾರ್ಯಕರ್ತರಿಗೆ ಅವರು ಕರೆ ನೀಡಿದ್ದಾರೆ. 

"ಚುನಾವಣಾ ಸಿದ್ಧತೆಯನ್ನು ಕಾಪಾಡಿಕೊಳ್ಳುವ ಸಂಕಲ್ಪದ ಭಾಗವಾಗಿ ಎಲ್ಲಾ ಬಿಎಸ್ಪಿ ಕಾರ್ಯಕರ್ತರು, ಪದಾಧಿಕಾರಿಗಳು ಮತ್ತು ಪಕ್ಷದ ಅಭ್ಯರ್ಥಿ ಶಾ ಆಲಂ ಅವರು ಅಜಂಗಢ ಲೋಕಸಭಾ ಉಪಚುನಾವಣೆಯಲ್ಲಿ ಹೋರಾಡಿದ ದೃಢತೆ ಮತ್ತು ಧೈರ್ಯವನ್ನು 2024 ರ ಲೋಕಸಭಾ ಸಾರ್ವತ್ರಿಕ ಚುನಾವಣೆಯವರೆಗೆ ಉಳಿಸಿಕೊಳ್ಳಬೇಕಾಗಿದೆ" ಮಾಯಾವತಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, ಬಿಎಸ್‌ಪಿಯ ಹೋರಾಟ ಮತ್ತು ಅಡಿಪಾಯವನ್ನು ಮತಗಳಾಗಿ ಪರಿವರ್ತಿಸಲು ಅಜಂಗಢ ಮಾತ್ರವಲ್ಲದೆ ಇಡೀ ಉತ್ತರಪ್ರದೇಶದಲ್ಲಿ ಪ್ರಯತ್ನಗಳನ್ನು ಮುಂದುವರಿಸಬೇಕು ಎಂದು ಅವರು ಹೇಳಿದ್ದಾರೆ. 

"ಈ ಅನುಕ್ರಮದಲ್ಲಿ, ಮುಂಬರುವ ಚುನಾವಣೆಗಳಲ್ಲಿ ನಿರ್ದಿಷ್ಟ ಸಮುದಾಯವನ್ನು ದಾರಿತಪ್ಪಿಸದಂತೆ ರಕ್ಷಿಸುವುದು ಸಹ ಮುಖ್ಯವಾಗಿದೆ" ಎಂದು ಅವರು ಮುಸ್ಲಿಂ ಮತದಾರರನ್ನು ಉಲ್ಲೇಖಿಸಿ ಹೇಳಿದ್ದಾರೆ ಎಂದು thenewindianexpress.com ವರದಿ ಮಾಡಿದೆ.

ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಲು ಬಿಎಸ್‌ಪಿಗೆ ಮಾತ್ರ "ನೆಲಬಲ" ಇದೆ ಎಂಬುದನ್ನು ಉಪಚುನಾವಣೆಯ ಫಲಿತಾಂಶ ಸಾಬೀತುಪಡಿಸಿದೆ ಎಂದು ಮಾಯಾವತಿ ರವಿವಾರ ಹೇಳಿದ್ದಾರೆ.

ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಲು ಬಿಎಸ್‌ಪಿಗೆ ಮಾತ್ರ 'ನೆಲಬಲ' ಇದೆ ಎಂಬುದನ್ನು ಯುಪಿ ಉಪಚುನಾವಣೆ ಫಲಿತಾಂಶ ಮತ್ತೊಮ್ಮೆ ಸಾಬೀತುಪಡಿಸಿದೆ. ಇಡೀ ಸಮುದಾಯಕ್ಕೆ ಇದನ್ನು ಸಾಬೀತುಪಡಿಸುವ ಪಕ್ಷದ ಪ್ರಯತ್ನವು ಮುಂದುವರಿಯುತ್ತದೆ, ಇದರಿಂದಾಗಿ ರಾಜ್ಯದಲ್ಲಿ ಬಹು ನಿರೀಕ್ಷಿತ ರಾಜಕೀಯ ಬದಲಾವಣೆಯು ನಡೆಯುತ್ತದೆ, ” ಎಂದು ಅವರು ಹೇಳಿದ್ದಾರೆ.

 “ಆಡಳಿತದಲ್ಲಿರುವ ಪಕ್ಷವೇ ಹೆಚ್ಚಿನ ಉಪಚುನಾವಣೆಗಳನ್ನು ಗೆಲ್ಲುತ್ತದೆ, ಆದರೂ ಅಜಂಗಢದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಎಸ್‌ಪಿ(ಸಮಾಜವಾದಿ ಪಕ್ಷಕ್ಕೆ) ಗೆ ಬಿಎಸ್‌ಪಿ ನೀಡಿದ ಕಠಿಣ ಹೋರಾಟ ಶ್ಲಾಘನೀಯ. ಎಲ್ಲಾ ಪಕ್ಷದ ಕಾರ್ಯಕರ್ತರು ಹೆಚ್ಚಿನ ಶಕ್ತಿಯೊಂದಿಗೆ ಮುನ್ನಡೆಯಬೇಕು” ಎಂದು ಅವರು ಟ್ವೀಟ್‌ ಮಾಡಿದ್ದಾರೆ.

 ಅಜಂಗಢ ಉಪಚುನಾವಣೆಯಲ್ಲಿ ಮಾತ್ರ ಬಿಎಸ್‌ಪಿ ಸ್ಪರ್ಧಿಸಿತ್ತು. ಪಕ್ಷದ ಅಭ್ಯರ್ಥಿ ಶಾ ಆಲಂ ಅಲಿಯಾಸ್ ಗುಡ್ಡು ಜಮಾಲಿ ಶೇ.29.27 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದಾರೆ. ರವಿವಾರ ನಡೆದ ಮತ ಎಣಿಕೆಯಲ್ಲಿ ಅಜಂಗಢ ಮತ್ತು ರಾಂಪುರ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News