ತೈಲ ಪೂರೈಕೆ : ರಶ್ಯ ಜತೆ ಒಪ್ಪಂದಕ್ಕೆ ಶ್ರೀಲಂಕಾ ಪ್ರಯತ್ನ‌

Update: 2022-06-27 16:26 GMT

ಕೊಲಂಬೊ, ಜೂ.27: ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಶ್ರೀಲಂಕಾದಲ್ಲಿ ತೈಲ ದಾಸ್ತಾನು ಬಹುತೇಕ ಬರಿದಾಗಿರುವ ಹಿನ್ನೆಲೆಯಲ್ಲಿ, ತೈಲ ಪೂರೈಸುವಂತೆ ರಶ್ಯಕ್ಕೆ ಮನವಿ ಮಾಡಲು ನಿರ್ಧರಿಸಿರುವ ಸರಕಾರ, ತನ್ನ ಇಬ್ಬರು ಸಚಿವರನ್ನು ರಶ್ಯಕ್ಕೆ ರವಾನಿಸಲಿದೆ ಎಂದು ಮೂಲಗಳು ಹೇಳಿವೆ.

  ರಶ್ಯದಿಂದ ನೇರವಾಗಿ ತೈಲ ಖರೀದಿಸುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲು ಇಬ್ಬರು ಸಚಿವರು ರಶ್ಯಕ್ಕೆ ತೆರಳಲಿದ್ದಾರೆ. ರಶ್ಯ ಸರಕಾರದಿಂದ ಅಥವಾ ಸಂಸ್ಥೆಗಳಿಂದ ನೇರವಾಗಿ ತೈಲ ಖರೀದಿಸಿದರೆ ನಮಗೆ ಪ್ರಯೋಜನವಿದೆ. ಈ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ ಎಂದು ಶ್ರೀಲಂಕಾದ ಇಂಧನ ಸಚಿವ ಕಾಂಚನ ವಿಜೆಸೇಕರ ಹೇಳಿದ್ದಾರೆ. ಉಕ್ರೇನ್ ಮೇಲೆ ರಶ್ಯ ಆಕ್ರಮಣ ನಡೆಸಿದಂದಿನಿಂದ ಜಾಗತಿಕ ತೈಲ ದರ ಗಗನಕ್ಕೇರಿದೆ. ರಶ್ಯದ ಆದಾಯ ಮೂಲಕ್ಕೆ ಕತ್ತರಿ ಹಾಕಲು ಅಮೆರಿಕ ಮತ್ತದರ ಮಿತ್ರದೇಶಗಳು ಪ್ರಯತ್ನಿಸುತ್ತಿದ್ದರೆ, ಡಿಸ್ಕೌಂಟ್ ದರದಲ್ಲಿ ತೈಲ ಪೂರೈಸುವ ಭರವಸೆ ನೀಡುವ ಮೂಲಕ ರಶ್ಯ ತಿರುಗೇಟು ನೀಡಿದೆ. ಉಕ್ರೇನ್ ಮೇಲಿನ ರಶ್ಯದ ವಿಷಯಕ್ಕೆ ಸಂಬಂಧಿಸಿ ನಿರ್ಲಿಪ್ತ ಧೋರಣೆ ತಳೆದಿರುವ ದೇಶಗಳಲ್ಲಿ ಶ್ರೀಲಂಕಾವೂ ಸೇರಿದೆ.

ಕಳೆದ ತಿಂಗಳು ಶ್ರೀಲಂಕಾ 90,000 ಮೆಟ್ರಿಕ್ ಟನ್ ಕಚ್ಛಾತೈಲವನ್ನು ಖರೀದಿಸಿತ್ತು. ಆದರೆ ಇದು ತೈಲ ಸಂಸ್ಕರಣಾಗಾರದ ಕಾರ್ಯವನ್ನು ಪುನರಾರಂಭಿಸುವ ಉದ್ದೇಶದ ವ್ಯವಹಾರವಾಗಿತ್ತು. ಈಗ ನೇರವಾಗಿ ತೈಲ ಖರೀದಿಸುವ ಯೋಜನೆಯಿದೆ ಎಂದು ಸಚಿವರು ಹೇಳಿದ್ದಾರೆ.
ಇತರ ದೇಶಗಳಿಂದ ತೈಲ ಪೂರೈಕೆಯಾಗದಿದ್ದರೆ ನಾವು ರಶ್ಯದಿಂದ ಖರೀದಿಸುವ ಅನಿವಾರ್ಯತೆಯಿದೆ ಎಂದು ಕಳೆದ ವಾರ ಪ್ರಧಾನಿ ರಣಿಲ್ ವಿಕ್ರಮಸಿಂಘೆ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News