ಉದಯಪುರ: ನೂಪುರ್‌ ಶರ್ಮಾ ಬೆಂಬಲಿಸಿದ ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

Update: 2022-06-28 15:07 GMT

ಉದಯಪುರ: ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡ ಆರೋಪದ ಮೇಲೆ ಇಂದು ಉದಯ್‌ಪುರದ ಮಾಲ್ದಾಸ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬನ ಹತ್ಯೆ ಮಾಡಲಾಗಿದೆ.  ಉದಯಪುರ ಬಸ್ ನಿಲ್ದಾಣದ ಬಳಿ ನಡೆದ ಸಂಪೂರ್ಣ ಘಟನೆಯನ್ನು ದಾಳಿಕೋರರು ರೆಕಾರ್ಡ್ ಮಾಡಿದ್ದಾರೆ ಎಂದು financialexpress.com ವರದಿ ಮಾಡಿದೆ. ಸದ್ಯ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಮೃತ ವ್ಯಕ್ತಿಯನ್ನು ಕನ್ಹಯ್ಯಾಲಾಲ್ ತೇಲಿ ಎಂದು ಗುರುತಿಸಲಾಗಿದೆ. ಟೈಲರ್ ಆಗಿದ್ದ ತೇಲಿ ಕೆಲವು ದಿನಗಳ ಹಿಂದೆ ನೂಪುರ್‌ ಶರ್ಮಾ ಅವರನ್ನು ಬೆಂಬಲಿಸಿ ವಾಟ್ಸಾಪ್ ಸ್ಟೇಟಸ್ ಹಾಕಿದ್ದರು. ತೇಲಿ ಅವರು ದನ್ಮಂಡಿ ಪ್ರದೇಶದಲ್ಲಿ 'ಸುಪ್ರೀಮ್ ಟೈಲರ್' ಹೆಸರಿನ ಅಂಗಡಿಯನ್ನು ಹೊಂದಿದ್ದರು.

ಕೃತ್ಯದ ಹೊಣೆಯನ್ನು ಇಬ್ಬರು ವ್ಯಕ್ತಿಗಳು ಹೊತ್ತುಕೊಂಡಿದ್ದು, ದುಷ್ಕರ್ಮಿಗಳನ್ನು ರಿಯಾಝ್‌ ಮತ್ತು ಮಹಮ್ಮದ್‌ ಎಂದು ಗುರುತಿಸಲಾಗಿದೆ.  ವರದಿಗಳ ಪ್ರಕಾರ, ಇವರಿಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಹತ್ಯೆಯ ಹೊಣೆ ಹೊತ್ತುಕೊಳ್ಳುವ ವಿಡಿಯೋ ಹರಿಯಬಿಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿಯವರನ್ನೂ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು financialexpress.com ವರದಿ ಹೇಳಿದೆ.

ದ್ವೇಷ ಹರಡುವ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಟೈಲರ್ ಸ್ವತಃ ಆರೋಪಿಯಾಗಿದ್ದು, ಈ ಹಿಂದೆ ಪೊಲೀಸರು ವಿಚಾರಣೆ ನಡೆಸಿದ್ದರು ಎಂದು ಉದಯಪುರದ ಪೊಲೀಸ್ ಅಧೀಕ್ಷಕ ಮನೋಜ್ ಕುಮಾರ್ ಹೇಳಿದ್ದಾರೆ.

ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಉದಯಪುರ ಎಸ್ಪಿ, ಕೆಲವು ಆರೋಪಿಗಳನ್ನು ಗುರುತಿಸಲಾಗಿದೆ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

“ಭೀಕರ ಹತ್ಯೆ ನಡೆದಿದ್ದು, ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು. ಕೆಲವು ಆರೋಪಿಗಳನ್ನು ಗುರುತಿಸಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಈ ಕೃತ್ಯ ಎಸಗಿದ್ದಾರೆಂದು ಹೇಳುವ ವ್ಯಕ್ತಿಗಳ ವಿಡಿಯೋದ ಮೇಲೆ ನಾವು ಕ್ರಮ ಕೈಗೊಳ್ಳುತ್ತೇವೆ” ಎಂದು ಕುಮಾರ್ ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.

ಹತ್ಯೆಯ ಬೆನ್ನಲ್ಲೇ ಉದಯಪುರದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News