‘ಅಗ್ನಿಪಥ್’ ವಿರುದ್ಧ ನಿರ್ಣಯ: ಪ್ರ‌ತಿಪಕ್ಷಗಳ ಸಲಹೆ ಅನುಮೋದಿಸಿದ ಪಂಜಾಬ್ ಮುಖ್ಯಮಂತ್ರಿ

Update: 2022-06-28 16:39 GMT

ಚಂಡಿಗಡ,ಜೂ.28: ಸಶಸ್ತ್ರ ಪಡೆಗಳಲ್ಲಿ ನೇಮಕಾತಿಗಾಗಿ ‘ಅಗ್ನಿಪಥ್’ ಯೋಜನೆಯ ವಿರುದ್ಧ ನಿರ್ಣಯವೊಂದನ್ನು ತರಬೇಕೆಂಬ ಪ್ರತಿಪಕ್ಷ ನಾಯಕ ಪ್ರತಾಪಸಿಂಗ್ ಬಾಜ್ವಾ ಅವರ ಸಲಹೆಯನ್ನು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರು ಅನುಮೋದಿಸಿದ್ದಾರೆ.

 ಮಂಗಳವಾರ ವಿಧಾನಸಭೆಯ ಶೂನ್ಯವೇಳೆಯಲ್ಲಿ ‘ಅಗ್ನಿಪಥ್’ ವಿಷಯವನ್ನೆತ್ತಿದ ಹಿರಿಯ ಕಾಂಗ್ರೆಸ್ ನಾಯಕ ಬಾಜ್ವಾ,ಈ ಯೋಜನೆಯು ಪಂಜಾಬಿನ ಯುವಜನರ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ ಎಂದು ವಾದಿಸಿದರು.
ಯೋಜನೆಯಿಂದಾಗಿ ಸೇನೆಯಲ್ಲಿ ಪಂಜಾಬಿನ ಪ್ರಾತಿನಿಧ್ಯವು ಭವಿಷ್ಯದಲ್ಲಿ ಈಗಿನ ಶೇ.7.8ರಿಂದ ಶೇ.2.3ಕ್ಕೆ ಕುಸಿಯುತ್ತದೆ ಎಂಬ ಆತಂಕವನ್ನು ವ್ಯಕ್ತಪಡಿಸಿದ ಅವರು,‘ಅಗ್ನಿಪಥ್’ಪಂಜಾಬಿನ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ ಎಂದರು.
ಮುಖ್ಯಮಂತ್ರಿಗಳು ಹಾಲಿ ವಿಧಾನಸಭಾ ಅಧಿವೇಶನದಲ್ಲಿ ‘ಅಗ್ನಿಪಥ್ ’ವಿರುದ್ಧ ಜಂಟಿ ನಿರ್ಣಯವನ್ನು ತರಬೇಕು ಎಂದು ಬಾಜ್ವಾ ಆಗ್ರಹಿಸಿದರು.
ಇದೊಂದು ಭಾವನಾತ್ಮಕ ವಿಷಯವಾಗಿದೆ ಎಂದು ಬಣ್ಣಿಸಿದ ಮಾನ್ ಬಾಜ್ವಾರ ಸಲಹೆಯನ್ನು ಅನುಮೋದಿಸಿದರಲ್ಲದೆ ಅದನ್ನು ಪರಿಗಣಿಸಲಾಗುವದು ಎಂದು ತಿಳಿಸಿದರು. ಯೋಜನೆಯ ವಿರುದ್ಧ ದೇಶದಲ್ಲಿಯ ಎಲ್ಲ ರಾಜ್ಯ ವಿಧಾನಸಭೆಗಳು ನಿರ್ಣಯವನ್ನು ತರಬೇಕು ಎಂದರು.
ನೋಟು ನಿಷೇಧ,ಈಗ ಹಿಂದೆಗೆದುಕೊಳ್ಳಲಾಗಿರುವ ಮೂರು ಕೃಷಿ ಕಾಯ್ದೆಗಳು ಮತ್ತು ಜಿಎಸ್ಟಿ ಕುರಿತೂ ಮಾನ್ ಕೇಂದ್ರವನ್ನು ತರಾಟೆಗೆತ್ತಿಕೊಂಡರು.
‘ಅಗ್ನಿಪಥ್’ ಕುರಿತಂತೆ ‘17 ವರ್ಷದ ಯುವಕರು ಸಶಸ್ತ್ರ ಪಡೆಗಳಿಗೆ ಸೇರುತ್ತಾರೆ ಮತ್ತು ಹೆಚ್ಚಿನವರು ಕೇವಲ ನಾಲ್ಕು ವರ್ಷಗಳ ಸೇವೆಯ ಬಳಿಕ ಮರಳುತ್ತಾರೆ ಎಂಬ ಪರಿಕಲ್ಪನೆಯ ಬಗ್ಗೆ ನಾವು ಯೋಚಿಸಿದಾಗ....ಮಾಜಿ ಯೋಧರು ಅರ್ಹರಾಗಿರುವ ಯಾವುದೇ ಸೌಲಭ್ಯಗಳಿಲ್ಲದೆ ಅವರು ನಾಲ್ಕು ವರ್ಷಗಳಲ್ಲಿ ‘ಮಾಜಿ ’ಯಾಗಿ ಬಿಡುತ್ತಾರೆ’ ಎಂದು ಹೇಳಿದ ಮಾನ್,ತಾನು ಈ ಯೋಜನೆಯನ್ನು ಕಟ್ಟುನಿಟ್ಟಾಗಿ ವಿರೋಧಿಸುತ್ತೇನೆ ಎಂದರು.
ಹಲವಾರು ಕಡೆಗಳಿಂದ ವಿರೋಧವನ್ನು ಎದುರಿಸುತ್ತಿರುವ ಇಂತಹ ಕಾನೂನುಗಳನ್ನು ಬಿಜೆಪಿ ಸರಕಾರವು ಏಕೆ ತರುತ್ತಿದೆ ಎನ್ನುವುದು ತನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದ ಮಾನ್,ಅವರು ಕೃಷಿ ಕಾಯ್ದೆಗಳನ್ನು,ಸಿಎಎ ಅನ್ನು ತಂದರು ಮತ್ತು ಈಗ ‘ಅಗ್ನಿಪಥ್’ ತಂದಿದ್ದಾರೆ. ಅವರು ಪ್ರತಿಬಾರಿಯೂ ಈ ಕಾನೂನುಗಳನ್ನು ತಂದಾಗ ಜನರು ಅವುಗಳನ್ನು ಅರ್ಥ ಮಾಡಿಕೊಂಡ ಬಳಿಕ ಅದರ ಲಾಭಗಳು ಅವರಿಗೆ ಗೊತ್ತಾಗುತ್ತವೆ ಎಂದು ಹೇಳುತ್ತಲೇ ಇರುತ್ತಾರೆ. ಅವರು ಮಾತ್ರ ಪ್ರತಿಯೊಂದನ್ನೂ ಅರ್ಥ ಮಾಡಿಕೊಳ್ಳುವ ಬುದ್ಧಿವಂತರೇ? ಜನರಿಗೆ ಅರ್ಥವಾಗದ ಕಾನೂನುಗಳನ್ನು ಮಾಡಲೇಬಾರದು ಎಂದರು.
‘ಅಗ್ನಿಪಥ್ ’ಯೋಜನೆಯನ್ನು ಸಮರ್ಥಿಸಿಕೊಂಡ ಪಂಜಾಬ್ ಬಿಜೆಪಿ ಮುಖ್ಯಸ್ಥ ಅಶ್ವನಿ ಶರ್ಮಾ ಅವರು,ಈ ವಿಷಯದಲ್ಲಿ ಸದನವನ್ನು ದಾರಿ ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿದರು.
ಬಾಜ್ವಾರ ಸಲಹೆಗೆ ಪ್ರತಿಕ್ರಿಯಿಸಿದ ಶರ್ಮಾ,ವಿರೋಧಿಸಬೇಕು ಎನ್ನುವ ಕಾರಣಕ್ಕೆ ‘ಅಗ್ನಿಪಥ್’ ಯೋಜನೆಯನ್ನು ವಿರೋಧಿಸುವುದು ಅವರಿಗೆ ಅನಿವಾರ್ಯವಾಗಿದೆ. ಈ ಯೋಜನೆಯು ಜಾರಿಗೊಂಡರೆ 2029ರಲ್ಲಿಯೂ ತಾವು ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಅವರಿಗೆ ಗೊತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News