ಭಟ್ಕಳ: ಪುರಸಭೆಯ ನಾಮಫಲಕದಲ್ಲಿರುವ ಉರ್ದುವಿಗೆ ಸಂಘಟನೆಗಳ ವಿರೋಧ

Update: 2022-06-28 17:43 GMT

ಭಟ್ಕಳ: ಭಟ್ಕಳ ಪುರಸಭೆಯ ನಾಮಫಲಕದಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಜೊತೆಗೆ ಉರ್ದುವಿನಲ್ಲೂ ಬರೆದಿರುವ ಹಿನ್ನೆಲೆಯಲ್ಲಿ ಕನ್ನಡ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಇದರಿಂದ ಸ್ಥಳದಲ್ಲಿ ಉಂಟಾದ ಗೊಂದಲಮಯ ವಾತಾವರಣವು ಮಂಗಳವಾರವೂ ಮುಂದುವರಿದಿದೆ.

ಮಂಗಳವಾರ ಮಧ್ಯಾಹ್ನ ಪುರಸಭೆಯ ಅಧಿಕಾರಿಗಳು ಪುರಸಭೆ ನಾಮಫಲಕದಲ್ಲಿದ್ದ ಉರ್ದು ಅಕ್ಷರಗಳನ್ನು ತೆರವುಗೊಳಿಸುತ್ತಾರೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆಯೇ ಉರ್ದು ಭಾಷೆಯನ್ನಾಡುವ ನೂರಾರು ಮಂದಿ ಜಮಾಯಿಸಿ ನಾಮಫಲಕದಲ್ಲಿರುವ ಉರ್ದು ಬರಹವನ್ನು ಯಾವುದೇ ಕಾರಣಕ್ಕೂ ಅಳಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ಪುರಸಭೆ ಅಧ್ಯಕ್ಷ ಪರ್ವೇಝ್ ಕಾಶಿಂಜಿ ಅವರು ಪುರಸಭೆಯ ಸದಸ್ಯರ ತುರ್ತು ಸಭೆಯನ್ನು ಕರೆದು ಚರ್ಚಿಸಿದರೂ ಒಮ್ಮತಕ್ಕೆ ಬರುವುದಕ್ಕೆ ಸಾಧ್ಯವಾಗಿಲ್ಲ ಎನ್ನಲಾಗಿದೆ. ಈ ಮಧ್ಯೆ ಸರಕಾರದ ಮಾರ್ಗಸೂಚಿ ಪ್ರಕಾರ ಕನ್ನಡ, ಇಂಗ್ಲಿಷ್ ಹಾಗೂ ಹಿಂದಿಗೆ ಮಾತ್ರ ಅವಕಾಶವಿರುವುದರಿಂದ ಸ್ಥಳೀಯ ಭಾಷೆಯನ್ನು ಸರಕಾರಿ ಕಚೇರಿಯಲ್ಲಿನ ನಾಮಫಲಕಕ್ಕೆ ಬಳಸಲು ಅವಕಾಶ ಇಲ್ಲ ಎಂದು ಹೇಳಿದ್ದರೂ ಸದಸ್ಯರು ಇದಕ್ಕೆ ಒಪ್ಪಲಿಲ್ಲ ಎಂದು ತಿಳಿದು ಬಂದಿದೆ.

ಸಹಾಯಕ ಆಯುಕ್ತೆ, ತಹಶೀಲ್ದಾರ್ ಭೇಟಿ: ಭಟ್ಕಳ ಪುರಸಭೆಗೆ ನಾಮಫಲಕ ಅಳವಡಿಕೆಗೆ ಸಂಬಂಧಪಟ್ಟಂತೆ ಉಂಟಾಗಿರುವ ಗೊಂದಲ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್., ತಹಶೀಲ್ದಾರ್ ಡಾ.ಸುಮಂತ್ ಭೇಟಿ ನೀಡಿ ಪುರಸಭೆ ಅಧ್ಯಕ್ಷರು, ಸದಸ್ಯರು ಹಾಗೂ ಮುಖ್ಯಾಧಿಕಾರಿಗಳೊಂದಿಗೆ ಚರ್ಚಿಸಿದರು.

ಬಿಗಿ ಬಂದೋಬಸ್ತ್: ಪುರಸಭೆಯ ನಾಮಫಲಕದಲ್ಲಿ ಉರ್ದು ಅಕ್ಷರದ ಬರೆಯಿಸಿದ ವಿವಾದ ಉಂಟಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪುರಸಭೆ ಕಚೇರಿಯ ಸುತ್ತಮುತ್ತ ಡಿವೈಎಸ್ಪಿ ಕೆ.ಯು. ಬೆಳ್ಳಿಯಪ್ಪ ನೇತೃತ್ವದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಜಿಲ್ಲೆಯ ಬೇರೆ ಬೇರೆ ಕಡೆಗಳಿಂದಲೂ ಹೆಚ್ಚುವರಿ ಪೊಲೀಸರನ್ನು ಕರೆಸಲಾಗಿದೆ.

ಸರಕಾರಿ ಕಚೇರಿ ನಾಮಫಲಕ ಕನ್ನಡದಲ್ಲಿರಲಿ: ಸರಕಾರಿ ಕಚೇರಿ ಮತ್ತು ಸಂಸ್ಥೆಗಳ ನಾಮಫಲಕವು ಸರಕಾರದ ನಿಯಮಗಳಿಗೆ ಅನುಗುಣವಾಗಿ ಆಡಳಿತ ಭಾಷೆಯಾದ ಕನ್ನಡ ಹಾಗೂ ಸರಕಾರ ಮಾನ್ಯ ಮಾಡಿರುವ ಭಾಷೆಯಲ್ಲಿಯೇ ಇರಬೇಕೆಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಗ್ರಹಿಸಿದೆ.

ಭಟ್ಕಳದ ಪುರಸಭೆಯು ಸರಕಾರ ಮಾನ್ಯ ಮಾಡಿರುವ ಭಾಷೆಯ ಹೊರತಾಗಿ ಅನ್ಯಭಾಷೆಯಲ್ಲಿ ನಾಮಫಲಕ ಅಳವಡಿಸಿರುವುದು ಜನಸಮುದಾಯದ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಆದರೆ ಆಡಳಿತಾತ್ಮಕ ವಿಷಯ ಬಂದಾಗ ಸರಕಾರಿ ಕಚೇರಿಗಳ ನಾಮಫಲಕಗಳು ಸರಕಾರ ಸೂಚಿಸಿರುವ ನಿಯಮಗಳಿಗೆ ಅನುಗುಣವಾಗಿಯೇ ಇರಬೇಕಾದುದು ಸೂಕ್ತ. ಭಾಷೆ ನಮ್ಮ ನಡುವಿನ ಸಂಪರ್ಕ ಸಾಧನವಾಗಬೇಕೇ ಹೊರತು ಸಂಘರ್ಷಕ್ಕೆ ಕಾರಣವಾಗಬಾರದು ಎಂದು ಕನ್ನಡ ಸಾಹಿತ್ಯ ಪರಿಷತ್ತು, ಆಗ್ರಹಿಸಿ ಸಹಾಯಕ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿದೆ.

ಈ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ, ಸಾಹಿತಿಗಳಾದ ಆರ್.ವಿ.ಸರಾಫ್. ಕಸಾಪ ಗೌರವ ಕಾರ್ಯದರ್ಶಿ ನಾರಾಯಣ ನಾಯ್ಕ, ಕೋಶಾಧ್ಯಕ್ಷ ಶ್ರೀಧರ ಶೇಟ್, ಸದಸ್ಯರಾದ ಎಂ.ಪಿ.ಬಂಡಾರಿ, ಗಣೇಶ ಯಾಜಿ, ವೆಂಕಟೇಶ ನಾಯ್ಕ, ಸಂತೋಷ ಆಚಾರ್ಯ, ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News