ಉದಯಪುರದ ಹತ್ಯೆ ತೀರಾ ಖಂಡನಾರ್ಹ: ಎಸ್ಕೆಎಸ್ಸೆಸ್ಸೆಫ್

Update: 2022-06-29 07:31 GMT

ಮಂಗಳೂರು : ಇತ್ತೀಚೆಗೆ ಪ್ರವಾದಿಯವರ ವಿರುದ್ಧ ಬಿಜೆಪಿ ವಕ್ತಾರೆ ನೀಡಿದ ವಿವಾದಾತ್ಮಕ ಹೇಳಿಕೆಯನ್ನು ಬೆಂಬಲಿಸಿದ್ದಕ್ಕಾಗಿ ಉದಯಪುರದ ಟೈಲರ್‌ವೊಬ್ಬರ ಹತ್ಯೆ ಮಾಡಿರುವುದು ನಿಜಕ್ಕೂ ಆತಂಕಕಾರಿ ಹಾಗೂ ಅದನ್ನು ಎಸ್ಕೆಎಸ್ಸೆಸ್ಸೆಫ್ ಬಲವಾಗಿ ಖಂಡಿಸುತ್ತದೆ ಎಂದು ರಾಜ್ಯಾಧ್ಯಕ್ಷ ಅನೀಸ್ ಕೌಸರಿ ತಿಳಿಸಿದ್ದಾರೆ.

ಪ್ರವಾದಿ ನಿಂದನೆಯನ್ನು ಯಾರಿಂದಲೂ ಸಹಿಸಲು ಸಾಧ್ಯವಿಲ್ಲ. ಆದರೆ ಅದನ್ನು ನೆಲದ ಕಾನೂನಿನಡಿಯಲ್ಲಿ ವಿರೋಧಿಸಬೇಕೇ ಹೊರತು ಹಿಂಸಾತ್ಮಕ ಅಥವಾ ಅಮಾನವೀಯವಾಗಿ ವರ್ತಿಸಿ ಸಮಾಜದ ಮಧ್ಯೆ ಭಯಭೀತ ವಾತಾವರಣವನ್ನು ಸೃಷ್ಟಿಸುವುದನ್ನು ಖಡಾಖಂಡಿತವಾಗಿ ವಿರೋಧಿಸುತ್ತೇವೆ. ದೇಶದ ಕಾನೂನನ್ನು ಪಾಲಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಅದನ್ನು ಮೀರುವವರ ಹಾಗೂ ಸಮಾಜದ ಶಾಂತಿ, ಸೌಹಾರ್ದ ವನ್ನು ಕೆಡಿಸುವ ದುಷ್ಟ ಶಕ್ತಿಗಳ ವಿರುದ್ಧ ನಿಷ್ಪಕ್ಷವಾದ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಅನ್ಯಾಯದ ವಿರುದ್ಧ ಧ್ವನಿ ಎತ್ತುವವರನ್ನು ಗುರಿಯಾಗಿಸುವ ಪ್ರಯತ್ನವನ್ನು ಕೇಂದ್ರ ಸರಕಾರ ಮಾಡುತ್ತಿದ್ದು, ಅದನ್ನು ಆದಷ್ಟು ಬೇಗ ನಿಲ್ಲಿಸಬೇಕು, ತೀಸ್ತಾ ಸೆಟಲ್ವಾಡ್, ಝಕಿಯಾ ಜಾಫ್ರಿ, ಪತ್ರಕರ್ತ ಝುಬೈರ್ ವಿರುದ್ಧದ ಸರಕಾರದ ನಡೆಯು ದಮನಿತರ ದನಿಯನ್ನು ಅಡಗಿಸುವ ಪ್ರಯತ್ನವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News