ಆಲ್ಟ್ ನ್ಯೂಸ್ ಸಹಸ್ಥಾಪಕ ಝುಬೈರ್ ಬಂಧನಕ್ಕೆ ಕಾರಣವಾದ ಟ್ವಿಟರ್ ಖಾತೆ ಈಗ ಅಸ್ತಿತ್ವದಲ್ಲಿಲ್ಲ!

Update: 2022-06-29 12:20 GMT

ಹೊಸದಿಲ್ಲಿ: ಆಲ್ಟ್ ನ್ಯೂಸ್ ಸಹಸ್ಥಾಪಕ ಮುಹಮ್ಮದ್ ಝುಬೈರ್ ಬಂಧನಕ್ಕೆ ಕಾರಣವಾದ ಅಜ್ಞಾತ ಟ್ವಿಟರ್ ಹ್ಯಾಂಡಲ್ ಈಗ ಸಾಮಾಜಿಕ ಜಾಲತಾಣದಲ್ಲಿ ಅಸ್ತಿತ್ವದಲ್ಲಿಲ್ಲ ಎಂದು scroll.in ವರದಿ ಮಾಡಿದೆ.

ಹನುಮಾನ್ ಭಕ್ತ್ ಹೆಸರಿನೊಂದಿಗೆ @balajikijaiin ಎಂಬ ಹೆಸರಿನ ಈ ಟ್ವಿಟರ್ ಖಾತೆಯಲ್ಲಿ ಹನುಮಾನ್ ಚಿತ್ರ ಪ್ರೊಫೈಲ್ ಇಮೇಜ್ ಆಗಿತ್ತು. 2018ರಲ್ಲಿ ಝುಬೈರ್ ಮಾಡಿದ್ದ ಟ್ವೀಟ್‍ಗೆ ಈ ಹ್ಯಾಂಡಲ್ ಹೊಂದಿರುವ ವ್ಯಕ್ತಿ ಆಕ್ಷೇಪಿಸಿದ್ದ. ಝುಬೈರ್ ಟ್ವೀಟ್‍ನಲ್ಲಿ ಹನಿಮೂನ್ ಹೋಟೆಲ್ 2014ರ ನಂತರ ಹನುಮಾನ್ ಹೋಟೆಲ್ ಆಗಿದೆ ಎಂದು ಹೇಳಿ ಹೋಟೆಲ್‍ನ ನಾಮಫಲಕದ ಚಿತ್ರ ಪೋಸ್ಟ್ ಮಾಡಿದ್ದರು.

ಇದು ಹನುಮಾನ್‍ಗೆ ಮಾಡಿದ ಅವಮಾನ ಎಂದು ಈ ನಿರ್ದಿಷ್ಟ ಖಾತೆದಾರ ಜೂನ್ 19ರಂದು ಟ್ವೀಟ್ ಮಾಡಿದ್ದ. "ನಮ್ಮ ದೇವರಾದ ಹನುಮಾನ್ ಜೀ ಅನ್ನು ಹನಿಮೂನ್‍ಗೆ ಹೋಲಿಸುವುದು ಹಿಂದುಗಳಿಗೆ ಅವಮಾನ, ಏಕೆಂದರೆ ಅವರು ಬ್ರಹ್ಮಚಾರಿ, ದಯವಿಟ್ಟು ಕ್ರಮಕೈಗೊಳ್ಳಿ,'' ಎಂದು ದಿಲ್ಲಿ ಪೊಲೀಸರನ್ನು ಟ್ಯಾಗ್ ಮಾಡಲಾಗಿತ್ತು.

ಈ ಖಾತೆಯಿಂದ ಮೂಡಿ ಬಂದ ಏಕೈಕ ಟ್ವೀಟ್ ಇದಾಗಿತ್ತಲ್ಲದೆ ಸೋಮವಾರ ಸಂಜೆ ಝುಬೈರ್ ಬಂಧನದ ತನಕ ಈ ಖಾತೆಗೆ ಮೂವರು ಫಾಲೋವರ್ಸ್ ಇದ್ದರು.

ಬುಧವಾರ ಬೆಳಿಗ್ಗೆ ಈ ಖಾತೆ ಅಸ್ತಿತ್ವದಲ್ಲಿಲ್ಲ ಎಂದು ಸೂಚಿಸುತ್ತಿದೆ ಎಂದು scroll.in ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News