ಜು.1ರಂದು ಪೌರ ಕಾರ್ಮಿಕರ ಧರಣಿ

Update: 2022-06-29 13:28 GMT

ಮಂದಳೂರು : ಪೌರ ಕಾರ್ಮಿಕರು ಸೇರಿದಂತೆ ಎಲ್ಲ ಸ್ವಚ್ಛತಾ ಕಾರ್ಮಿಕರನ್ನು ಏಕಕಾಲದಲ್ಲಿಯೇ ಖಾಯಂ ಗೊಳಿಸಲು ಆಗ್ರಹಿಸಿ ದ.ಕ. ಜಿಲ್ಲಾಕಾರಿಗಳ ಕಚೇರಿಯ ಮುಂಭಾಗದಲ್ಲಿ ಜು.೧ರಿಂದ ಅನಿರ್ದಿಷ್ಟಾವಧಿ ಕಾಲ ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ದ.ಕ. ಜಿಲ್ಲಾ ಪೌರ ಕಾರ್ಮಿಕರ ಹಾಗೂ ನಾಲ್ಕನೇ ದರ್ಜೆ ನೌಕರರ ಸಂಘ ಮಂಗಳೂರು ಇದರ ಅಧ್ಯಕ್ಷ ಅನಿಲ್ ಕುಮಾರ್ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾನ ಕೆಲಸಕ್ಕೆ ಸಮಾನ ವೇತನಕ್ಕೆ ಆಗ್ರಹಿಸಿ ಧರಣಿ ನಡೆಯಲಿದೆ. ದ.ಕ.ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗವು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಒಳಚರಂಡಿ (ಯು.ಜಿ.ಡಿ) ನೇರ ಪಾವತಿ ಪೌರ ಕಾರ್ಮಿಕರು, ಹೆಚ್ಚುವರಿ ಪೌರ ಕಾರ್ಮಿಕರು ಮತ್ತು ಮನೆ ಕಸ ಸಂಗ್ರಹ ಹಾಗೂ ಕಸ ಸಾಗಾಣಿಕೆ ಮಾಡುವ ವಾಹನ ಚಾಲಕರು, ಲೋಡರ್, ಸಹಾಯಕರು ಹಾಗೂ ಪೌರಕಾರ್ಮಿಕರ ಮೇಲ್ವಿಚಾರಕರು ಮತ್ತು ಎಲ್ಲ ಸ್ವಚ್ಛತಾ ಕಾರ್ಮಿಕರನ್ನು ಏಕಕಾಲಕ್ಕೆ ಖಾಯಂಗೊಳಿಸಲು ಇದರ ಜತೆಯಲ್ಲಿ ವಿವಿಧ ಸ್ಥಳೀಯ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟ  ಕಾಲ ರಾಜ್ಯದಾದ್ಯಂತ ಆಯಾಯ ಜಿಲ್ಲಾಕಾರಿಗಳ ಕಚೇರಿ ಮುಂದೆ ಧರಣಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದವರು ಹೇಳಿದರು.

ಎಲ್‌ಪಿಎಸ್ ರದ್ದು ಮಾಡಬೇಕು. ಪೌರ ಕಾರ್ಮಿಕರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಸಂಪೂರ್ಣ ಸಹಾಯಧನ ಒದಗಿಸಬೇಕು. ಪಚ್ಚನಾಡಿಯಲ್ಲಿ ಪೌರಕಾರ್ಮಿಕರಿಗೆ ಮೀಸಲಿಟ್ಟ ಜಾಗ ಅತಿಕ್ರಮಣವಾಗಿದ್ದು, ಅದನ್ನು ತೆರವು ಗೊಳಿಸಿ ಪೌರ ಕಾರ್ಮಿಕರಿಗೆ ಒದಗಿಸಬೇಕು ಇತ್ಯಾದಿ ಹಲವು ಬೇಡಿಕೆಗಳಿಗಾಗಿ ಒತ್ತಾಯಿಸಲಾಗುವುದು ಎಂದು ಅನಿಲ್ ಕುಮಾರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಎಸ್.ಪಿ. ಆನಂದ, ಜಿಲ್ಲಾ ಮುಖಂಡ ಇಶು ಕುಮಾರ್, ಕಮಿಟಿ ಸದಸ್ಯರಾದ ಸುರೇಶ್ ಉರ್ವ, ನಾಗೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News