ನಿವೃತ್ತಿಯ ಬಳಿಕ ಅಗ್ನಿವೀರರನ್ನು ನೇಮಿಸಿಕೊಳ್ಳುವಂತೆ ಸೂಚಿಸಿದ್ದಕ್ಕಾಗಿ ಕೇಂದ್ರದ ವಿರುದ್ಧ ಮಮತಾ ವಾಗ್ದಾಳಿ

Update: 2022-06-29 13:58 GMT

ಕೋಲ್ಕತಾ,ಜೂ.29: ಅಗ್ನಿವೀರರು ನಾಲ್ಕು ವರ್ಷಗಳ ಬಳಿಕ ಸಶಸ್ತ್ರ ಪಡೆಗಳಿಂದ ನಿವೃತ್ತರಾದ ಬಳಿಕ ಅವರನ್ನು ನೇಮಕ ಮಾಡಿಕೊಳ್ಳುವಂತೆ ಸೂಚಿಸಿ ಕೇಂದ್ರವು ರಾಜ್ಯ ಸರಕಾರಗಳಿಗೆ ಪತ್ರಗಳನ್ನು ರವಾನಿಸಿದೆ ಎಂದು ಆರೋಪಿಸಿರುವ ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು,ಬಿಜೆಪಿ ಕಾರ್ಯಕರ್ತರಿಗೆ ರಾಜ್ಯಗಳೇಕೆ ಉದ್ಯೋಗ ನೀಡಬೇಕು ಎಂದು ಪ್ರಶ್ನಿಸಿದ್ದಾರೆ. ತನ್ನ ರಾಜ್ಯದ ಯುವಜನರಿಗೆ ಆದ್ಯತೆಯನ್ನು ನೀಡುವುದಾಗಿ ಅವರು ಹೇಳಿದ್ದಾರೆ.

ಮಂಗಳವಾರ ಇಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು,‘ನಾನು ಕೇಂದ್ರ ಸರಕಾರದಿಂದ ಪತ್ರವೊಂದನ್ನು ಸ್ವೀಕರಿಸಿದ್ದು,ಅಗ್ನಿವೀರರು ನಾಲ್ಕು ವರ್ಷಗಳ ಸೇವೆ ಪೂರ್ಣಗೊಳಿಸಿದ ಬಳಿಕ ಅಗತ್ಯ ಮಾಹಿತಿಗಳನ್ನು ತನ್ನಿಂದ ಪಡೆದುಕೊಂಡು ಅವರಿಗೆ ರಾಜ್ಯ ಸರಕಾರದಲ್ಲಿ ಉದ್ಯೋಗ ನೀಡುವಂತೆ ಅದು ಸೂಚಿಸಿದೆ. ನಾವೇಕೆ ಬಿಜೆಪಿ ಕಾರ್ಯಕರ್ತರಿಗೆ ಉದ್ಯೋಗಗಳನ್ನು ನೀಡಬೇಕು? ಅಗ್ನಿವೀರರಿಗೆ ಉದ್ಯೋಗಗಳನ್ನು ನೀಡುವುದಕ್ಕೆ ನಮ್ಮ ತಕರಾರಿಲ್ಲ. ಅದು ನಮ್ಮ ರಾಜ್ಯದಲ್ಲಿಯ ಉದ್ಯೋಗವಾಗಿದ್ದರೆ ನಾವದನ್ನು ನಮ್ಮ ರಾಜ್ಯದ ಯುವಜನರಿಗೆ ನೀಡುತ್ತೇವೆ. ನೀವು ಅವರನ್ನು ನಾಲ್ಕು ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳುತ್ತೀರಿ ಮತ್ತು ಬಳಿಕ ಹೊಣೆಯನ್ನು ರಾಜ್ಯಗಳಿಗೆ ಹೊರಿಸುತ್ತೀರಿ. ನಮ್ಮ ರಾಜ್ಯದಲ್ಲಿ ಉದ್ಯೋಗದ ಅಗತ್ಯವಿರುವ ಯುವಜನರಿಗೆ ಕೊರತೆಯಿಲ್ಲ. ನಾವು ಅವರಿಗೆ ಮೊದಲ ಆದ್ಯತೆಯನ್ನು ನೀಡುತ್ತೇವೆ ’ಎಂದು ಹೇಳಿದರು.

ಅಗ್ನಿಪಥ್ ಯೋಜನೆಯು 2024ರ ಲೋಕಸಭಾ ಚುನಾವನೆಗಳವರೆಗೆ ಮಾತ್ರ ಅಸ್ತಿತ್ವದಲ್ಲಿರಲಿದೆ ಎಂದೂ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News