ಬ್ರಿಟನ್: ವೈದ್ಯಕೀಯ ವಿದ್ಯಾರ್ಥಿಗಳಿಗೆ ಹೊಲೊಗ್ರಾಫಿಕ್ ತಂತ್ರಜ್ಞಾನದ ತರಬೇತಿ

Update: 2022-06-29 15:52 GMT

 ಲಂಡನ್, ಜೂ.29: ವಿಆರ್ ಹೆಡ್‌ಸೆಟ್ ಬಳಸಿ ಹೊಲೊಗ್ರಾಫಿಕ್ ತಂತ್ರಜ್ಞಾನದ ಮೂಲಕ ರೋಗಿಗಳನ್ನು ಪರೀಕ್ಷಿಸುವ ತರಬೇತಿಯನ್ನು ವೈದ್ಯಕೀಯ ವಿದ್ಯಾರ್ಥಿಗಳಿಗೆ ಬ್ರಿಟನ್‌ನಲ್ಲಿ ಒದಗಿಸಲಾಗುತ್ತಿದ್ದು, ಇದು ವಿಶ್ವದಲ್ಲೇ ಪ್ರಥಮ ಉಪಕ್ರಮವಾಗಿದೆ ಎಂದು ಬ್ರಿಟನ್‌ನ ಕ್ಯಾಂಬ್ರಿಡ್ಜ್ ವಿವಿ ಹೇಳಿದೆ. ಹೊಲೊಗ್ರಫಿ ಒಂದು ನವೀನ ಇಮೇಜಿಂಗ್ ತಂತ್ರಜ್ಞಾನವಾಗಿದ್ದು ಇದು ವಿಭಿನ್ನ ಅಪ್ಲಿಕೇಶನ್‌ಗಳಿಗೆ ಬಳಸಬಹುದಾದ ವಿವರವಾದ ಚಿತ್ರಣವನ್ನು ರಚಿಸುತ್ತದೆ. ವೈದ್ಯಕೀಯ ಚಿತ್ರಣದಲ್ಲಿ ಆಂತರಿಕ ಮತ್ತು ಬಾಹ್ಯ ಮಾನವ ದೇಹದ ಭಾಗಗಳ ಚಿತ್ರಣದ ಅವಶ್ಯಕತೆಯಿದೆ. ಕಂಪ್ಯೂಟರ್ ಸಾಫ್ಟ್‌ವೇರ್ ಬಳಸಿ ನೈಜ ಪ್ರಪಂಚದ ಸನ್ನಿವೇಶವನ್ನು ರೂಪಿಸುವ ಮೂಲಕ ರೋಗಿಗಳನ್ನು ಪರೀಕ್ಷಿಸುವ ಪ್ರಕ್ರಿಯೆ ಇದಾಗಿದೆ. ಮಸೂರಗಳ(ಲೆನ್ಸ್) ಬಳಕೆಯಿಲ್ಲದೆ ವಸ್ತುವಿನ ಸ್ಟೀರಿಯೊಸ್ಕೋಪಿಕ್ ಚಿತ್ರವನ್ನು ಪಡೆಯುವ ತಂತ್ರವನ್ನು ಹೊಲೊಗ್ರಾಫಿ ಎಂದು ಕರೆಯಲಾಗುತ್ತದೆ. ಹೊಲೊಗ್ರಾಫಿ ಮೂಲಕ ಮೂರು ಆಯಾಮದ ಚಿತ್ರವನ್ನು ಪಡೆಯಲಾಗುತ್ತದೆ. ಹೆಡ್‌ಸೆಟ್‌ಗಳನ್ನು ಹಾಕಿಕೊಂಡಾಗ, ಮೂರು ಆಯಾಮದ ಜೀವಸದೃಶ ರೋಗಿಯು ಅವರ ಎದುರಿನ ಕಂಪ್ಯೂಟರ್‌ನ ಮಾನಿಟರ್ ಮೇಲೆ ಕಾಣಿಸಿಕೊಳ್ಳುವ ತಂತ್ರಜ್ಞಾನವಿದು. ಏಡನ್‌ಬ್ರೂಕ್ಸ್ ಆಸ್ಪತ್ರೆಯ ವಿದ್ಯಾರ್ಥಿಗಳು ಹೊಲೊಸಿನೆರಿಯೊ ಎಂಬ ತರಬೇತಿ ವ್ಯವಸ್ಥೆಯನ್ನು ಬಳಸುತ್ತಿದ್ದಾರೆ ಎಂದು ಕ್ಯಾಂಬ್ರಿಡ್ಜ್ ವಿವಿ ಹೇಳಿದೆ. ಇದು ಜೀವಸದೃಶ ಹೊಲೊಗ್ರಾಮ್‌ನೊಂದಿಗೆ ಬೋಧನೆ ಮತ್ತು ಕಲಿಕೆಯನ್ನು ಸಕ್ರಿಯಗೊಳಿಸುತ್ತದೆ. ಇದನ್ನು ಜಗತ್ತಿನ ಯಾವ ಮೂಲೆಯಲ್ಲಿ ಕುಳಿತೂ ಅಧ್ಯಯನ ನಡೆಸಬಹುದು . ಈ ತಂತ್ರಜ್ಞಾನವನ್ನು ಕ್ಯಾಂಬ್ರಿಡ್ಜ್ ವಿವಿ ಆಸ್ಪತ್ರೆಯ ಎನ್‌ಎಚ್‌ಎಸ್ ಫೌಂಡೇಷನ್ ಟ್ರಸ್ಟ್ (ಸಿಯುಎಚ್), ಕ್ಯಾಂಬಿಡ್ಜ್ ವಿವಿ ಮತ್ತು ಲಾಸ್ ಏಂಜಲೀಸ್ ಮೂಲದ ಟೆಕ್‌ಸಂಸ್ಥೆ ಗಿಗ್‌ಎಕ್ಸ್‌ಆರ್ ಅಭಿವೃದ್ಧಿಪಡಿಸಿದೆ ಎಂದು ಕ್ಯಾಂಬ್ರಿಡ್ಜ್ ವಿವಿ ಮಾಹಿತಿ ನೀಡಿದೆ. ಈ ಹೊಸ ತಂತ್ರಜ್ಞಾನವು ಸಾಂಪ್ರದಾಯಿಕ ದೃಶ್ಯೀಕರಣಕ್ಕಿಂತ ಕಡಿಮೆ ವೆಚ್ಚದಾಯಕ, ಸುಲಭದಲ್ಲಿ ಮತ್ತು ಎಲ್ಲಿಂದಲೂ ಬಳಸಲು ಸಾಧ್ಯವಾಗಿರುವ ತರಬೇತಿ ವ್ಯವಸ್ಥೆಯಾಗಿದೆ. ತರಬೇತಿ ಪಡೆಯುವವರು ಎಂಆರ್ ಹೆಡ್‌ಸೆಟ್‌ಗಳನ್ನು ಹಾಕಿಕೊಂಡಿರುತ್ತಾರೆ. ವಿದ್ಯಾರ್ಥಿಗಳು ಬಹುಪದರದ, ವೈದ್ಯಕೀಯವಾಗಿ ನಿಖರವಾದ ಹೊಲೊಗ್ರಾಫಿಕ್ ರೋಗಿಗಳೊಂದಿಗೆ ಸಂವಹನ ನಡೆಸಲು ಸಾಧ್ಯವಾಗುತ್ತದೆ ಎಂದು ‘ದಿ ಇಂಡಿಪೆಂಡೆಂಟ್’ ವರದಿ ಮಾಡಿದೆ. ಎಂಆರ್ ಸಿಮ್ಯುಲೇಟರ್ ತರಬೇತಿಯು ಉಪಯುಕ್ತ ವಿಧಾನವಾಗಿ ಹೆಚ್ಚು ಗುರುತಿಸಲ್ಪಟ್ಟಿದೆ ಎಂದು ಸಿಯುಎಚ್‌ನಲ್ಲಿ ಸಲಹೆಗಾರ ಅರಿವಳಿಕಾ ತಜ್ಞರಾಗಿರುವ ಮತ್ತು ಈ ಯೋಜನೆಯ ನೇತೃತ್ವ ವಹಿಸಿದ್ದ ಡಾ. ಅರುಣ್ ಗುಪ್ತಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News