ಸೋಮಾರಿಯಾಗಿ ಬೀಚ್‌ನಲ್ಲಿ ಕುಳಿತಿರಲು 68 ಬಿ.ಡಾ.ಕಂಪನಿಯನ್ನು ತೊರೆದ ಸಿಇಒ!

Update: 2022-06-29 17:25 GMT

ಹೊಸದಿಲ್ಲಿ,ಜೂ.29: ಲಂಡನ್‌ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಜ್ಯುಪಿಟರ್ ಫಂಡ್ ಮ್ಯಾನೇಜ್‌ಮೆಂಟ್ ಪಿಎಲ್‌ಸಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ ) ಆ್ಯಂಡ್ರೂ ಫಾರ್ಮಿಕಾ ಅವರು ತನ್ನ ಹುದ್ದೆಗೆ ದಿಢೀರ್ ರಾಜೀನಾಮೆ ಸಲ್ಲಿಸುವ ಮೂಲಕ ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದ್ದಾರೆ.

ಮಾರ್ಚ್,2019ರಲ್ಲಿ 68 ಶತಕೋಟಿ ಡಾ.ಗಳ ಫಂಡ್ ಮ್ಯಾನೇಜ್‌ಮೆಂಟ್ ಸಂಸ್ಥೆ ಜ್ಯುಪಿಟರ್‌ಗೆ ಸೇರಿದ್ದ ಫಾರ್ಮಿಕಾ ಅ.1ರಂದು ತನ್ನ ಹುದ್ದೆಯನ್ನು ತೆರವುಗೊಳಿಸಲಿದ್ದಾರೆ ಎಂದು ಕಂಪನಿಯ ಹೇಳಿಕೆಯನ್ನು ಉಲ್ಲೇಖಿಸಿ ಬ್ಲೂಮ್‌ಬರ್ಗ್ ವರದಿ ಮಾಡಿದೆ.

ಫಾರ್ಮಿಕಾ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ರಾಜೀನಾಮೆಗೆ ನಿರ್ಧರಿಸಿದ್ದಾರೆ ಮತ್ತು ತನ್ನ ವಯಸ್ಸಾದ ಹೆತ್ತವರೊಂದಿಗಿರಲು ತವರುದೇಶ ಆಸ್ಟ್ರೇಲಿಯಾಕ್ಕೆ ಮರಳಲು ಬಯಸಿದ್ದಾರೆ ಎಂದು ವರದಿಯು ತಿಳಿಸಿದೆ.

‘ನಾನು ಏನನ್ನೂ ಮಾಡದೇ ಸಮುದ್ರ ತೀರದಲ್ಲಿ ಕುಳಿತುಕೊಂಡು ಕಾಲ ಕಳೆಯಲು ಬಯಸಿದ್ದೇನೆ ’ಎಂದು ಫಾರ್ಮಿಕಾ ಹೇಳಿದ್ದಾರೆ.

ಸುಮಾರು ಮೂರು ದಶಕಗಳನ್ನು ಬ್ರಿಟನ್‌ನಲ್ಲಿ ಕಳೆದಿರುವ ಫಾರ್ಮಿಕಾ ಜ್ಯುಪಿಟರ್‌ಗೆ ಸೇರುವ ಮುನ್ನ ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು.

ಜ್ಯುಪಿಟರ್‌ನ ಮುಖ್ಯ ಹೂಡಿಕೆ ಅಧಿಕಾರಿ ಮ್ಯಾಥ್ಯೂ ಬೀಸ್ಲಿ ಅವರು ಫಾರ್ಮಿಕಾರ ಉತ್ತರಾಧಿಕಾರಿಯಾಗಲಿದ್ದಾರೆ. ಫಾರ್ಮಿಕಾ ಜ್ಯುಪಿಟರ್‌ನ ನಿರ್ದೇಶಕ ಹುದ್ದೆಯನ್ನೂ ತೊರೆಯಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News