ಇಸ್ರೇಲ್ ಸಂಸತ್ತಿನ ವಿಸರ್ಜನೆ: ನಾಲ್ಕು ವರ್ಷಗಳಲ್ಲಿ ಐದನೇ ಚುನಾವಣೆಗೆ ದೇಶ ಸಜ್ಜು

Update: 2022-06-30 12:49 GMT
 ನಫ್ತಾಲಿ ಬೆನೆಟ್ (PTI)

ಟೆಲ್ಅವಿವ್, ಜೂ.30: ಇಸ್ರೇಲ್ನ ಸಂಸತ್ತು ಗುರುವಾರ ವಿಸರ್ಜನೆಗೊಂಡಿದ್ದು, ದೇಶವು ನಾಲ್ಕು ವರ್ಷಗಳಲ್ಲಿ ಐದನೇ ಚುನಾವಣೆಗೆ ಸಾಕ್ಷಿಯಾಗಲಿದೆ. ನೂತನ ಚುನಾವಣೆಗಳು ನ.1ರಂದು ನಡೆಯಲಿವೆ.

ನಿರ್ಗಮಿಸಲಿರುವ ಸಮ್ಮಿಶ್ರ ಸರಕಾರದ ಮುಖ್ಯ ರೂವಾರಿಯಾಗಿದ್ದ ಇಸ್ರೇಲ್ ನ ವಿದೇಶಾಂಗ ಸಚಿವ ಯಾಯಿರ್ ಲಾಪಿಡ್ ಅವರು ಶುಕ್ರವಾರ ಮಧ್ಯರಾತ್ರಿಯ ಬಳಿಕ ದೇಶದ ಉಸ್ತುವಾರಿ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಅವರು ನಫ್ತಾಲಿ ಬೆನೆಟ್ ಬಳಿಕ ಈ ಹುದ್ದೆಗೇರಲಿರುವ 14ನೇ ವ್ಯಕ್ತಿಯಾಗಲಿದ್ದಾರೆ. ಬೆನೆಟ್ ಇಸ್ರೇಲ್ ನ ಅತ್ಯಂತ ಸಂಕ್ಷಿಪ್ತ ಅವಧಿಯ ಪ್ರಧಾನಿ ಎಂಬ ಹಣೆಪಟ್ಟಿಯೊಂದಿಗೆ ಅಧಿಕಾರದಿಂದ ಕೆಳಗಿಳಿಯುತ್ತಿದ್ದಾರೆ.

ವಿಭಿನ್ನ ಸಿದ್ಧಾಂತಗಳನ್ನು ಹೊಂದಿರುವ ಪಕ್ಷಗಳ ಮೈತ್ರಿಕೂಟವು 12 ವರ್ಷಗಳ ಸುದೀರ್ಘ ಅವಧಿಗೆ ಪ್ರಧಾನಿಯಾಗಿದ್ದ ಬೆಂಜಮಿನ್ ನೆತನ್ಯಾಹು ಅವರನ್ನು ಪದಚ್ಯುತಗೊಳಿಸಿದ ಬಳಿಕ ಅಧಿಕಾರಕ್ಕೇರಿದ್ದ ಸಮ್ಮಿಶ್ರ ಸರಕಾರವು ಒಂದು ವರ್ಷದ ಅವಧಿಯನ್ನು ಪೂರೈಸಿದ ಬೆನ್ನಿಗೇ ಗುರುವಾರ ಪತನಗೊಂಡಿದೆ. ಮೈತ್ರಿಕೂಟವು ಮೊದಲ ಬಾರಿಗೆ ಅರಬ್ ಬಣವೊಂದನ್ನೂ ಒಳಗೊಂಡಿತ್ತು.

ಹೊಸ ಚುನಾವಣೆಯ ದಿನಾಂಕ ಮತ್ತು ಕೊನೆಯ ಕ್ಷಣದ ಶಾಸನಗಳ ಕುರಿತು ಮೈತ್ರಿಕೂಟ ಮತ್ತು ಪ್ರತಿಪಕ್ಷಗಳ ನಡುವೆ ದಿನಗಟ್ಟಲೆ ಕಚ್ಚಾಟದ ಬಳಿಕ ಗುರುವಾರ ಸಂಸತ್ ವಿಸರ್ಜನೆ ನಿರ್ಣಯದ ಮೇಲೆ ನಡೆದ ಮತದಾನದಲ್ಲಿ 92 ಸಂಸದರು ನಿರ್ಣಯದ ಪರವಾಗಿ ಮತ ಚಲಾಯಿಸಿದ್ದು,ವಿರುದ್ಧವಾಗಿ ಒಂದೂ ಮತ ಚಲಾವಣೆಯಾಗಿರಲಿಲ್ಲ.

ಎರಡು ವರ್ಷಗಳಲ್ಲಿ ನಾಲ್ಕು ಚುನಾವಣೆಗಳು ನಡೆದ ಬಳಿಕ ದೇಶದಲ್ಲಿಯ ಎಂಟು ರಾಜಕೀಯ ಪಕ್ಷಗಳು ಸಾಮಾನ್ಯ ನೆಲೆಯನ್ನು ಕಂಡುಕೊಳ್ಳಲು ಪ್ರಯತ್ನಿಸಿದ್ದ ರಾಜಕೀಯ ಪ್ರಯೋಗವೊಂದಕ್ಕೆ ಗುರುವಾರದ ಬೆಳವಣಿಗೆಯು ವಿಧ್ಯುಕ್ತ ಅಂತ್ಯವನ್ನು ಹಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News