ಫಿಲಿಪ್ಪೀನ್ಸ್: ಅಧ್ಯಕ್ಷರಾಗಿ ಮಾರ್ಕೋಸ್ ಜೂನಿಯರ್ ಪ್ರಮಾಣ ವಚನ

Update: 2022-06-30 15:06 GMT
Photo: Twitter/@bongbongmarcos

ಮನಿಲಾ, ಜೂ.30: ಫಿಲಿಪ್ಪೀನ್ಸ್‌ನ ಮಾಜಿ ಸರ್ವಾಧಿಕಾರಿ ಫರ್ಡಿನಾಂಡ್ ಮಾರ್ಕೋಸ್ ಪುತ್ರ ಫರ್ಡಿನಾಂಡ್ ಮಾರ್ಕೋಸ್ ಜ್ಯೂನಿಯರ್ ದೇಶದ 17ನೇ ಅಧ್ಯಕ್ಷರಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಮನಿಲಾದ ನ್ಯಾಷನಲ್ ಮ್ಯೂಸಿಯಂನಲ್ಲಿ ನಡೆದ ಪ್ರಮಾಣವಚನ ಕಾರ್ಯಕ್ರಮದಲ್ಲಿ ಸ್ಥಳೀಯ ಹಾಗೂ ವಿದೇಶಿ ಗಣ್ಯರು, ಬೆಂಬಲಿಗರು, ಪತ್ರಕರ್ತರು ಹಾಗೂ ಮಾರ್ಕೋಸ್ ಅವರ 92 ವರ್ಷದ ತಾಯಿ ಹಾಜರಿದ್ದರು. ಮಾರ್ಕೋಸ್‌ರನ್ನು ಚುನಾವಣೆಗೆ ಅನರ್ಹಗೊಳಿಸಿ ಅವರು ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸದಂತೆ ತಡೆಯಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿತ್ತು.

 ಪ್ರಮಾಣವಚನ ಸ್ವೀಕರಿಸಿದ ಬಳಿಕ ಮಾತನಾಡಿದ ಮಾರ್ಕೋಸ್, ತನ್ನ ತಂದೆಯ ಆಡಳಿತವನ್ನು ಶ್ಲಾಘಿಸಿದರು. ದೇಶದ ಒಳಿತನ್ನು ಆಶಿಸಿದ್ದ ಓರ್ವ ವ್ಯಕ್ತಿಯ ಬಗ್ಗೆ ನನಗೆ ತಿಳಿದಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದರೂ ಹೆಚ್ಚಿನದೇನನ್ನೂ ಸಾಧಿಸಿಲ್ಲ ಎಂದವರಿಗೆ ಬೇಸರವಿತ್ತು ಮತ್ತು ಅವರು ಅದನ್ನು ಮಾಡಿ ತೋರಿಸಿದರು. ತನ್ನ ತಂದೆಯ ಆಡಳಿತಾವಧಿಯಲ್ಲಿ ರಸ್ತೆ ಸಂಪರ್ಕ ವ್ಯವಸ್ಥೆ, ಭತ್ತದ ಬೆಳೆಗೆ ನೀಡಿದಷ್ಟು ಉತ್ತೇಜನ, ಪ್ರೋತ್ಸಾಹವನ್ನು ಬೇರೆ ಯಾರಿಂದಲೂ ಮಾಡಲಾಗಿಲ್ಲ. ಈಗ ಆ ಹೊಣೆ ಅವರ ಪುತ್ರನ ಮೇಲೆ ಬಿದ್ದಿದೆ ಎಂದು ಮಾರ್ಕೋಸ್ ಜ್ಯೂನಿಯರ್ ಹೇಳಿದರು.

  ಹೆಚ್ಚುತ್ತಿರುವ ಬೆಲೆಗಳು, ಹಣದುಬ್ಬರದ ಸಮಸ್ಯೆ ಹಾಗೂ ಆರ್ಥಿಕತೆಯ ಬಿಕ್ಕಟ್ಟನ್ನು ಪರಿಹರಿಸುವ ಗುರುತರ ಹೊಣೆ ಮಾರ್ಕೋಸ್ ಮೇಲಿದೆ. ದಕ್ಷಿಣ ಚೀನಾ ಸಮುದ್ರ ವಿವಾದಕ್ಕೆ ಸಂಬಂಧಿಸಿ ಫಿಲಿಪ್ಪೀನ್ಸ್‌ನ ಹಕ್ಕುಗಳನ್ನು ರಕ್ಷಿಸಿಕೊಳ್ಳುವುದಕ್ಕೆ ಆದ್ಯತೆ ನೀಡುವುದಾಗಿ ಮಾರ್ಕೋಸ್ ಘೋಷಿಸಿದ್ದಾರೆ.

64 ವರ್ಷದ ಫರ್ಡಿನಾಂಡ್ ‘ಬೋನ್‌ಬಾಂಗ್’ ಮಾರ್ಕೋಸ್ ಜೂನಿಯರ್ ಚುನಾವಣೆಯಲ್ಲಿ ಜನಪ್ರಿಯ ಮುಖಂಡ, ಹಾಲಿ ಅಧ್ಯಕ್ಷ ರಾಡ್ರಿಗೊ ಡ್ಯುಟೆರ್ಟ್ ಎದುರು ಭರ್ಜರಿ ಗೆಲುವು ಸಾಧಿಸಿದ್ದರು. ದೇಶವನ್ನು ಸರ್ವಾಧಿಕಾರಿಯಾಗಿ ಆಳಿದ್ದ ಫರ್ಡಿನಾಂಡ್ ಮಾರ್ಕೋಸ್ ವಿರುದ್ಧ ದೇಶದಲ್ಲಿ ಪ್ರತಿಭಟನೆ ಭುಗಿಲೆದ್ದ ಹಿನ್ನೆಲೆಯಲ್ಲಿ 1986ರಲ್ಲಿ ಮಾರ್ಕೋಸ್ ಕುಟುಂಬ ದೇಶದಿಂದ ಓಡಿಹೋಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News