ಭಟ್ಕಳ; ಸರ್ಕಾರಿ ಕಟ್ಟಡಗಳ ನಾಮಫಲಕದಲ್ಲಿ ಕನ್ನಡ, ಇಂಗ್ಲಿಷ್ ಹೊರತು ಇತರ ಭಾಷೆಗೆ ಅವಕಾಶವಿಲ್ಲ: ಜಿಲ್ಲಾಧಿಕಾರಿ

Update: 2022-06-30 15:40 GMT

ಭಟ್ಕಳ: ಪುರಸಭೆ ನೂತನ ವಾಣಿಜ್ಯ ಕಟ್ಟಡಕ್ಕೆ ಕನ್ನಡ ಇಂಗ್ಲಿಷ್ ಜೊತೆಗೆ ಉರ್ದು ಅಕ್ಷರಗಳನ್ನು ಅಳವಡಿಸುವ ವಿಚಾರವಾಗಿ ಸಂಘಪರಿವಾರದ ಸಂಘಟನೆಗಳಿಂದ ಪ್ರತಿರೋಧ ಉಂಟಾಗಿರುವ ಹಿನ್ನೆಲೆಯಲ್ಲಿ ವಿವಾದ ಉಂಟಾಗಿದ್ದು ಗುರುವಾರ  ಜಿಲ್ಲಾಧಿಕಾರಿ ಆದೇಶದಿಂದಾಗಿ ತೆರವುಗೊಂಡಿದೆ.

ಗುರುವಾರ ಪುರಸಭೆ ಸದಸ್ಯರು ಹಾಗೂ ಮುಖಂಡರೊಂದಿಗೆ ಸಹಾಯಕ ಆಯುಕ್ತರ ಕಚೇರಿಯಲ್ಲಿ ಸಭೆ ನಡೆಸಿದ ಜಿಲ್ಲಾಧಿಕಾರಿ ಮುಲೈ ಮುಹಿಲನ್, ಸರ್ಕಾರಿ ಕಟ್ಟಡದಲ್ಲಿ ಕನ್ನಡ ಇಂಗ್ಲಿಷ್ ಹೊರತು ಪಡಿಸಿ ಯಾವುದೇ ಭಾಷೆಯನ್ನು ಅಳವಡಿಸಲು ಕಾನೂನಿನಲ್ಲಿ ಅವಕಾಶ ಇಲ್ಲದ ಕಾರಣ ಭಟ್ಕಳ ಪುರಸಭೆ ಕಟ್ಟಡದ ನಾಮಫಲಕದಲ್ಲಿ ಅಳವಡಿಸಲಾಗಿರುವ ಉರ್ದು ಅಕ್ಷರಗಳನ್ನು ತೆರವುಗೊಳಿಸುವಂತೆ ಆದೇಶ ನೀಡಿ ಭಟ್ಕಳ ಪುರಸಭೆಯ ನಾಮಫಲಕದಲ್ಲಿ ಅಳವಡಿಸಲಾಗಿರುವ ಉರ್ದು ಭಾಷೆಯ ಅಕ್ಷರಗಳನ್ನು ತೆರವುಗೊಳಿಸಿದರು. 

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಭಟ್ಕಳದಲ್ಲಿ ಮುಂಬರುವ ಹಬ್ಬ ಮತ್ತು ಪುರಸಭೆಯ ವಿಷಯಕ್ಕೆ ಸಂಬಂಧಿಸಿದಂತೆ ಮುಖಂಡರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ಭಟ್ಕಳದಲ್ಲಿ ಸಭೆ ನಡೆಸಲಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಭಟ್ಕಳ ಪುರಸಭೆ ನೂತನ ಕಟ್ಟಡದಲ್ಲಿ ಉರ್ದು ಅಳವಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನಿನಲ್ಲಿ ಯಾವುದೇ ಅವಕಾಶ ಇಲ್ಲದ ಕಾರಣ ನಾಮಫಲಕದಿಂದ ಉರ್ದು ಭಾಷೆಯ ಅಕ್ಷರಗಳನ್ನು ತೆಗೆಯಲು ಆದೇಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಅಲ್ಲದೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈ ಕುರಿತಂತೆ ಯಾವುದೇ ಠರಾವು ಆಗದೆ ಇರುವುದರಿಂದ ಸ್ಪಷ್ಟನೆಯನ್ನು ಕೋರಿ ಪುರಸಭಾ ಮುಖ್ಯಾಧಿಕಾರಿ ಪತ್ರಬರೆಯಲಾಗಿತ್ತು. ಕಾನೂನು ಪ್ರಕಾರ ಯಾವುದೆ ಠರಾವು ಮಾಡದೆ ಇದನ್ನು ಅಳವಡಿಸಲಾಗಿದೆ. ನಾಮಫಲಕದಲ್ಲಿ ಉರ್ದು ಭಾಷೆಯನ್ನು ತೆರವುಗೊಳಿಸಲು ಪೊಲೀಸ್ ರಕ್ಷಣೆಯನ್ನು ಕೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾನೂನನ್ನು ಪರಿಶೀಲಿಸಿದ್ದು ಇದಕ್ಕೆ ಕಾನೂನಿನಲ್ಲಿ ಯಾವುದೇ ಅವಕಾಶ ಇಲ್ಲದೆ ಕಾರಣ ತೆರವುಗೊಳಿಸುಂತೆ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪೌರಾಡಳಿತ ನಿರ್ದೇಶಾನಾಲಯವು 22-02-2018 ರಂದು ಇಂತಹದ್ದೇ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕನ್ನಡ ಮತ್ತು ಆಂಗ್ಲ ಭಾಷೆಯನ್ನು ಹೊರತು ಪಡಿಸಿ ಬೇರೆ ಭಾಷೆಯನ್ನು ಸರ್ಕಾರ ಕಚೇರಿಯ ನಾಮಫಲಕದಲ್ಲಿ ಅಳವಡಿಸಲು ಕಾನೂನು ಮತ್ತು ನಿಯಮದಲ್ಲಿ ಯಾವುದೇ ಅವಕಾಶ ಇರುವುದಿಲ್ಲ ಎಂಬ ಸ್ಪಷ್ಟೀಕರಣವನ್ನು ನೀಡಿದ್ದು ಇರುತ್ತದೆ. ಇದರ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕರ ಹಿತಾದೃಷ್ಟಿಯಿಂದ ನಾಮಫಲಕದಲ್ಲಿ ಅಳವಡಿಸಿರುವ ಉರ್ದು ಅಕ್ಷರಗಳನ್ನು ತೆರವುಗೊಳಿಸುವಂತೆ ಆದೇಶವನ್ನು ನೀಡಿದ್ದಾಗಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ., ಪೆನ್ನೇಕರ್, ಸಹಾಯಕ ಆಯುಕ್ತೆ ಮಮತಾದೇವಿ, ತಹಸಿಲ್ದಾರ್ ಸುಮಂತ್ ಬಿ.ಇ., ಮತ್ತಿತರರು ಉಪಸ್ಥಿತರಿದ್ದರು. 

ಕಾನೂನು ಹೋರಾಟಕ್ಕೆ ತುರ್ತು ಸಭೆ ನಿರ್ಧಾರ: ಜಿಲ್ಲಾಧಿಕಾರಿಯ ಆದೇಶದ ಮೆರೆಗೆ ಭಟ್ಕಳ ಪುರಸಭಾ ವಾಣಿಜ್ಯಕಟ್ಟಡಕ್ಕೆ ಕನ್ನಡ ಇಂಗ್ಲಿಷ್ ಜೊತೆಗೆ ಅಳವಡಿಸಲಾಗಿದ್ದ ಉರ್ದು ಭಾಷೆಯ ಅಕ್ಷರಗಳನ್ನು ತೆಗೆಯಲಾಗಿದ್ದು ಇದೇ ವಿಷಯಕ್ಕಾಗಿ ಗುರುವಾರ ಸಂಜೆ ತುರ್ತು ಪುರಸಭೆಯ ವಿಶೇಷ ಸಾಮಾನ್ಯಸಭೆ ನಡೆದಿದ್ದು ಜಿಲ್ಲಾಧಿಕಾರಿಯವರ ಆದೇಶವನ್ನು ಸಾಮಾನ್ಯ ಸಭೆಯಲ್ಲಿ ಖಂಡಿಸಲಾಗಿದ್ದು ಇದರ ವಿರುದ್ಧ ಕನೂನು ಹೋರಾಟ ಮುಂದುವರೆಸಲಾಗುವುದು ಎಂದು ಒಕ್ಕೋರಲಿನಿಂದ ಠರಾವು ಕೈಗೊಳ್ಳಲಾಗಿದೆ ಎಂದು ಪುರಸಭೆ ಅಧ್ಯಕ್ಷ ಪರ್ವೇಝ್ ಕಾಶಿಮಜಿ ಮಾಧ್ಯಮಗಳಿಗೆ ತಿಳಿಸಿದರು.

ಉರ್ದು ಅಳವಡಿಕೆಗೆ ಸಂಬಂಧಿಸಿದಂತೆ ಇಷ್ಟೊಂದು ವಿವಾದ ಅನಗತ್ಯವಾಗಿತ್ತು. ಈಗ ಜಿಲ್ಲಾಧಿಕಾರಿಯವರ ಆದೇಶ ಪಾಲನೆಯಾಗಿದೆ. ಆದರೆ ಇದರ ವಿರುದ್ಧ ನಾವು ಸಂವಿಧಾನಿಕ ರೀತಿಯಲ್ಲಿ ಕಾನೂನು ಹೋರಾಟ ನಡೆಸುತ್ತೇವೆ. ಅಲ್ಪಸಂಖ್ಯಾತರ ಭಾಷೆಗೆ ಸಂಬಂದಿಸಿದಂತೆ ಕಾನೂನಿನಲ್ಲಿ ಅವಕಾಶವಿದ್ದು ಕಾನೂನಿನ ಮೂಲಕವೇ ಇದಕ್ಕೆ ಪರಿಹಾರ ಕಂಡುಕೊಳ್ಳುತ್ತೇವೆ. ಅಲ್ಲಿಯ ತನಕ ಸಾರ್ವಜನಿಕರು ಶಾಂತಿಯಿಂದ ವರ್ತಿಸಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಜೆ.ಡಿ.ಎಸ್. ಮುಖಂಡ ಇನಾಯತುಲ್ಲಾ ಶಾಬಂದ್ರಿ, ನಾವು ಕನ್ನಡ ವಿರೋಧಿಗಳು ಎಂಬಂತೆ ಮಾಧ್ಯಮಗಳು ಬಿಂಬಿಸುತ್ತಿವೆ. ಆದರೆ ನಾವು ಕೂಡ ಕನ್ನಡಿಗರೆ, ದುಬೈ, ಸೌದಿ ಮತ್ತಿತರ ದೇಶಗಳಲ್ಲಿ ಕನ್ನಡ ಸಂಘ ಕಟ್ಟುವಲ್ಲಿ ಭಟ್ಕಳದ ಮುಸ್ಲಿಮರು ಮುಂಚೂಣಿಯಲ್ಲಿದ್ದಾರೆ. ಆದರೆ ಕೆಲ ಸಂಘಪರಿವಾರದವರು ಕನ್ನಡಶಾಲು ಹಾಕಿಕೊಂಡು ಬಂದು ತಾವು ಕನ್ನಡ ಪ್ರೇಮಿಗಳೆಂದು ಬಿಂಬಿಸಿಕೊಳ್ಳುತ್ತಿ ದ್ದಾರೆ. ಪುರಸಭೆಯ ತಪ್ಪಿನಿಂದಾಗಿ ನಾವು ಸಾರ್ವಜನಿಕರ ಮುಂದೆ ಅವಮಾನಿತರಾಗಬೇಕಾಗಿ ಬಂದಿದೆ. ಪುರಸಭೆಯಲ್ಲಿ ಠರಾವು ಮಾಡದೆ ಶಾಸಕ ಸುನಿಲ್ ನಾಯ್ಕ ಅನಧಿಕೃತವಾಗಿ ಆಟೋ ರಿಕ್ಷಾ ನಿಲ್ದಾಣ ಕಟ್ಟಿಸಿಕೊಟ್ಟಿದ್ದಾರೆ ಅದನ್ನು ಕೂಡ ಮುಂದಿನ ದಿನಗಳಲ್ಲಿ ತೆರವುಗೊಳಿಸಬಹುದು. ಹಾಗೆಯೆ ಶಾಸಕರ ಕುಮ್ಮಕ್ಕಿನಿಂದಾಗಿ ಒಂದುವರೆ ಕೋಟಿ ರೂ ವೆಚ್ಚ ಮಾಡಿ ಕಟ್ಟಿಸಿದ್ದ ನೂತನ ಮೀನುಮಾರುಕಟ್ಟೆ ಇದುವರೆಗೂ ಸ್ಥಳಾಂತರವಾಗದೆ ದುಸ್ಥಿತಿ ಕಾಣುತ್ತಿದೆ. ಈ ಎಲ್ಲ ವಿಷಯಗಳ ಬಗ್ಗೆಯೂ  ಜಿಲ್ಲಾದಿಕಾರಿಗಳು ವಿಶೇಷ ಕಾಳಜಿ ವಹಿಸಬೇಕು ಎಂದು ಆಗ್ರಹಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News