ಸುಡಾನ್: ಸಾಮೂಹಿಕ ಪ್ರತಿಭಟನೆಗೆ ಸಿದ್ಧತೆ

Update: 2022-06-30 15:54 GMT

  ಖಾರ್ಟಮ್, ಜೂ.30: ದೇಶದ ಆಡಳಿತವನ್ನು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮರಳಿಸಬೇಕೆಂದು ಆಗ್ರಹಿಸಿ ದೇಶದಾದ್ಯಂತ ನಡೆಯುವ ಸಾಮೂಹಿಕ ರ್ಯಾಲಿ ಮತ್ತು ಪ್ರತಿಭಟನೆಗೆ ಕೈಜೋಡಿಸುವಂತೆ ಸುಡಾನ್‌ನ ಮಾನವ ಹಕ್ಕು ಕಾರ್ಯಕರ್ತರು ಜನತೆಗೆ ಕರೆ ನೀಡಿದ್ದಾರೆ.

2019ರಲ್ಲಿ ನಡೆದಿದ್ದ ಕ್ಷಿಪ್ರಕ್ರಾಂತಿಯಲ್ಲಿ ದೇಶದ ಅಧ್ಯಕ್ಷ ಒಮರ್ ಅಲ್‌ಬಶೀರ್‌ರನ್ನು ಪದಚ್ಯುತಗೊಳಿಸಿದ್ದ ಸೇನಾಧಿಕಾರಿಗಳು ಆಡಳಿತವನ್ನು ಕೈಗೆತ್ತಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ವಿದೇಶಿ ಸರಕಾರಗಳು ಸುಡಾನ್‌ಗೆ ನೀಡುತ್ತಿದ್ದ ನೆರವನ್ನು ಸ್ಥಗಿತಗೊಳಿಸಿರುವುದರಿಂದ ದೇಶ ಈಗ ಅಸಾಮಾನ್ಯ ಆರ್ಥಿಕ ಬಿಕ್ಕಟ್ಟಿನ ಸಂಕಷ್ಟದಲ್ಲಿದೆ.

 1989ರಲ್ಲಿ ಒಮರ್ ಅಲ್‌ಬಶಿರ್ ನೇತೃತ್ವದಲ್ಲಿ ನಡೆದಿದ್ದ ದಂಗೆಯಲ್ಲಿ ದೇಶದ ಪ್ರಜಾಪ್ರಭುತ್ವ ಸರಕಾರವನ್ನು ಪದಚ್ಯುತಗೊಳಿಸಲಾಗಿತ್ತು. ಬಳಿಕ 3 ದಶಕಗಳ ಕಾಲ ಅವರು ದೇಶವನ್ನು ಬಿಗಿಹಿಡಿತದಿಂದ ಆಳಿದ್ದರು. 2019ರಲ್ಲಿ ಬಶಿರ್ ವಿರುದ್ಧ ನಡೆದಿದ್ದ ಕ್ಷಿಪ್ರಕ್ರಾಂತಿಯಲ್ಲಿ ಸೇನೆಯ ಮುಖ್ಯಸ್ಥ ಅಬ್ದುಲ್ ಫತಾಹ್ ಅಲ್‌ಬರ್ಹನ್ ಅಧಿಕಾರ ವಶಪಡಿಸಿಕೊಂಡಿದ್ದರು.

ದೇಶದ ಆಡಳಿತವನ್ನು ಮತ್ತೆ ಪ್ರಜಾಪ್ರಭುತ್ವ ಸ್ಥಿತಿಗೆ ಮರಳಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜಧಾನಿ ಖಾರ್ಟಮ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಗುರುವಾರ ಬೆಳಗ್ಗಿನಿಂದಲೇ ಪ್ರಮುಖ ನಗರಗಳಲ್ಲಿ ಇಂಟರ್‌ನೆಟ್ ಮತ್ತು ಫೋನ್ ಸಂಪರ್ಕ ಅಸ್ತವ್ಯಸ್ತಗೊಂಡಿದ್ದು ಜನರು ಒಟ್ಟುಸೇರುವುದನ್ನು ತಡೆಯಲು ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ ಎಂದು ವರದಿ ಹೇಳಿದೆ.

ಕ್ಷಿಪ್ರಕ್ರಾಂತಿಯ ಮೂಲಕ ಅಧಿಕಾರ ವಶಪಡಿಸಿಕೊಂಡಿರುವವರು ಅಧಿಕಾರವನ್ನು ಜನರಿಗೆ ಮರಳಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾನವಹಕ್ಕು ಮತ್ತು ನಾಗರಿಕ ಹೋರಾಟಗಾರರ ಸಂಘಟನೆ ‘ಫೋರ್ಸಸ್ ಫಾರ್ ಫ್ರೀಡಂ ಆ್ಯಂಡ್ ಚೇಂಜ್’ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News